ಹೆಸ್ಕಾ ಕಚೇರಿಗೆ ಬೀಗ ಹಾಕಿ ರೈತರಿಂದ ಪ್ರತಿಭಟನೆ

ಇಂಡಿ:ಆ.26:ರೈತರಿಗೆ ನಿರಂತರ ಏಳು ಗಂಟೆ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ತಾಲೂಕಿನ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಕಚೇರಿ ಎದುರು ನೂರಾರು ರೈತರು 7 ಗಂಟೆ ಸತತ ವಿದ್ಯುತ್ ಆಗ್ರಹಿಸಿ ಘೋಷಣೆ ಕೂಗಿದರು.
ಹೆಸ್ಕಾಂ ಎಂ.ಡಿ ಸ್ಥಳಕ್ಕೆ ಬಂದು ಅಶ್ವಾಸನೆ ನೀಡುವ ಹೊರತು ಪ್ರತಿಭಟನೆ ಹಿಂದೆ ಪಡೆಯುವದಿಲ್ಲ ಎಂದು ಪಟ್ಟು ಹಿಡಿದರು.
ಸಭೆಯಲ್ಲಿ ಮಾತನಾಡಿದ ಕಾಸುಗೌಡ ಬಿರಾದಾರ ಈ ಮೊದಲು ರೈತರಿಗೆ ಹಗಲು ಹೊತ್ತಿನಲ್ಲಿ ನಿರಂತರ ಏಳು ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಕಳೆದ ಒಂದು ತಿಂಗಳಿಂದ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಹೀಗಾಗಿ ಮೋಟಾರು ಸುಟ್ಟು ರೈತರಿಗೆ ತೊಂದರೆ ಯಾಗುತ್ತಿದೆ ಎಂದರು.
.ಡಿ.ಪಾಟೀಲ ಹಂಜಗಿಯವರು ಮಾತನಾಡಿ ಒಂದು ತಿಂಗಳ ಹಿಂದೆ ಹಗಲು ಏಳು ಗಂಟೆ ವಿದ್ಯುತ್ ನೀಡುತ್ತಿದ್ದರು.ಈಗ ಬೆಳಿಗ್ಗೆ ಮೂರು ಗಂಟೆ ನೀಡುತ್ತಾರೆ. ಅದರಲ್ಲಿ ಒಂದುವರೆ ಗಂಟೆ ಮಧ್ಯೆ ಕಡಿತ ಮಾಡುತ್ತಾರೆ. ನಂತರ ರಾತ್ರಿ 10 ರಿಂದ 2 ರ ವರೆಗೆ ಇಲ್ಲವೆ ರಾತ್ರಿ 2 ರಿಂದ ಬೆಳಗಿನ 6 ರ ವರೆಗೆ ವಿದ್ಯುತ್ ನೀಡುತ್ತಾರೆ. ಅದರಲ್ಲೂ ಒಂದುವರೆ ಗಂಟೆ ಕಡಿತ ಮಾಡುತ್ತಾರೆ ಎಂದರು.
ಪ್ರೊ ಸಿದ್ದಲಿಂಗ ಹಂಜಗಿ ಮಾತನಾಡಿ ವಿದ್ಯುತ್ ಕಡಿತ ಕುರಿತು ಅಧಿಕಾರಿಗಳಿಗೆ ಫೋನು ಮಾಡಿದರೆ ಫೋನು ಎತ್ತುದಿಲ್ಲ.ಟಿ.ಸಿ.ಸುಟ್ಟರೆ 24 ಗಂಟೆಯಲ್ಲಿ ನೀಡಬೇಕು ಎಂಬ ಆದೇಶವಿದೆ.ರೈತರಿಗೆ ಟಿ.ಸಿ ಕೊಡುವದೇ ಇಲ್ಲ ಎಂದರು. ರಾತ್ರಿ ಬಿಡಲು ಹೋಗಿ ರೈತ ಸತ್ತಿದ್ದಾನೆ. ಇಂತಹ ಪರಿಸ್ಥಿತಿ ಮರುಕಳಿಸದಂತೆ ನಿರಂತರ ಹಗಲು ಹೊತ್ತು ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವದು ಎಂದರು.
ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಸೋಮು ನಿಂಬರಗಿಮಠ,ಶ್ರೀಶೈಲಗೌಡ ಬಿರಾದಾರ, ಅಪ್ಪು ಗುಡ್ಲ, ಹಣಮಂತ ಗುಡ್ಲ,ವಾಯ್.ಎ.ಪಾಟೀಲ,ಶರತ ಪಾಟೀಲ ಮಾತನಾಡಿದರು.
ಮಹಿಬೂಬ ಬೇನೂರ,ಅಯೂಬ ನಾಟಿಕಾರ,ಖಾಜು ಮುಲ್ಲಾ, ಯಲ್ಲಪ್ಪ ಹದರಿ,ಸಿದ್ದು ಡಂಗಾ ಸೇರಿದಂತೆ ವಿವಿಧ ಗ್ರಾಮಗಳಿಂದ ರೈತರು ಪಾಲ್ಗೊಂಡಿದ್ದರು.
ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಅಭಿಯಂತರ ಎಸ್.ಎ.ಬಿರಾದಾರ ಮತ್ತು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ಆರ್.ಮೆಂಡೆಗಾರ ಮಾತನಾಡಿ ವಿದ್ಯುತ್ ಉತ್ಪಾದನೆ ಕುಂಠಿತ ಗೊಂಡಿರುವ ಕಾರಣ ಸಧ್ಯಕ್ಕೆ ಹಗಲು ಹೊತ್ತಿನಲ್ಲಿ ಸತತವಾಗಿ ಏಳು ಗಂಟೆ ವಿದ್ಯುತ್ ಪೂರೈಸಲು ಸಾದ್ಯವಾಗುತ್ತಿಲ್ಲ. ಪರಿಸ್ಥಿತಿ ಸುಧಾರಣೆ ನಂತರ ಮೊದಲಿನಂತೆ ಏಳು ಗಂಟೆ ವಿದ್ಯುತ್ ಪುರೈಸಲು ಕ್ರಮ ಜರುಗಿಸಲಾಗುವದೆಂದು ಭರವಸೆ ನೀಡಿದರು.