ಹೆಸ್ಕಾಂ ಆನ್‍ಲೈನ್ ಪಾವತಿ ವ್ಯವಸ್ಥೆ ಸರಿಪಡಿಸಲು ಆಗ್ರಹ

ಲಕ್ಷ್ಮೇಶ್ವರ,ಮೇ15: ಉತ್ತರ ಕರ್ನಾಟಕ ವ್ಯಾಪ್ತಿಯ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಇದರ ಆನ್ಲೈನ್ ವ್ಯವಸ್ಥೆ ಕೈಕೊಟ್ಟು ಎರಡು ತಿಂಗಳಾಗಿದ್ದರೂ ಸಂಬಂಧಪಟ್ಟ ಕಂಪನಿಯ ಅಧಿಕಾರಿಗಳು ಯಾವುದೇ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಕಳೆದ ಎರಡು ತಿಂಗಳ ದಿಂದ ಗ್ರಾಹಕರು ಉಪವಿಭಾಗದ ಕಚೇರಿಗಳ ವಿಭಾಗದಲ್ಲಿನ ಬಿಲ್ ಕೌಂಟರ್‍ನಲ್ಲಿ ಸಾಲುಗಟ್ಟಿ ನಿಲ್ಲುವ ಕಿರಿಕಿರಿಯನ್ನು ಅನುಭವಿಸಬೇಕಾಗಿದೆ. ಪಟ್ಟಣ ಮತ್ತು ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶದ ಜನರು ಆನ್ಲೈನ್ ಮೂಲಕ ಬಿಲ್ಲನ್ನು ಪಾವತಿಸುತ್ತಿದ್ದರು ಒಮ್ಮಿಂದೊಮ್ಮೆಲೆ ಈ ವ್ಯವಸ್ಥೆಯನ್ನು ಹೆಸ್ಕಾಂ ನವರು ಸ್ಥಗಿತಗೊಳಿಸಿರುವುದರಿಂದ ಗ್ರಾಹಕರಿಗೆ ಶಾಕ್ ಆಗಿದೆ ಇದಕ್ಕೆ ಸಂಬಂಧಪಟ್ಟಂತೆ ಹೆಸ್ಕಾಂ ಅಧಿಕಾರಿಗಳು ಜನರಿಗೆ ಸಾರ್ವಜನಿಕವಾಗಿ ವ್ಯವಸ್ಥೆಯ ಸ್ಥಗಿತದ ಬಗ್ಗೆಯೂ ಚಕಾರ ಎತ್ತದಿರುವುದು ಗ್ರಾಹಕರಿಗೆ ತಲೆ ನೋವಾಗಿದೆ.
ಬಿಲ್ ಕಟ್ಟುವದು ಎರಡು ದಿನ ಹೆಚ್ಚು ಕಡಿಮೆಯಾದರೆ ಹೆಸ್ಕಾಂನ ಸಿಬ್ಬಂದಿಯವರು ಮನೆಯ ವಿದ್ಯುತ್ ಪೂರೈಕೆಯನ್ನು ಕಡಿತ ಮಾಡುತ್ತಿದ್ದಾರೆ. ಆದರೆ ಯಾವುದೇ ಮುನ್ಸೂಚನೆ ನೀಡಿದೆ ಆನ್‍ಲೈನ್ ವ್ಯವಸ್ಥೆಯನ್ನು ಕಟ್ ಮಾಡಿರುವುದು ಏಕೆ ಎಂಬುದರ ಬಗ್ಗೆ ತಿಳಿಯದಂತಾಗಿದೆ.
ಕಿರಿಕಿರಿ ತಪ್ಪಿಸಲು ಎಲ್ಲ ಇಲಾಖೆಗಳು ಆನ್‍ಲೈನ್ ವ್ಯವಸ್ಥೆ ಜಾರಿ ಮಾಡಿದ್ದರೆ ಇಂಧನ ಇಲಾಖೆಯವರು ಅದರಲ್ಲೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯವರು ಕೈ ಕಟ್ಟಿ ಕುಳಿತಿರುವುದು ಗ್ರಾಹಕರಿಗೆ ಇನ್ನಿಲ್ಲದ ತೊಂದರೆಯಾಗಿದೆ.
ಆದ್ದರಿಂದ ಕೂಡಲೇ ಹೆಸ್ಕಾಂನ ಎಂ ಡಿ ಅವರ ಆಗಲಿ, ಮುಖ್ಯ ಇಂಜಿನಿಯರ್ ಆಗಲಿ ಆನ್‍ಲೈನ್ ವ್ಯವಸ್ಥೆಯನ್ನು ಬಿಲ್ ಪಾವತಿಸಲು ಮತ್ತೆ ಜಾರಿಗೆ ತಂದು ಗ್ರಾಹಕರಿಗಾಗಿರುವ ತೊಂದರೆಯನ್ನು ತಪ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.