ಹೆಸರು ನೋಂದಾಯಿಸಲು ರೈತರು ಹಿಂದೇಟು

ಲಕ್ಷ್ಮೇಶ್ವರ,ಮಾ13 : ತಾಲೂಕಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ದ್ವಿದಳ ಧಾನ್ಯ ಹಾಗೂ ವಾಣಿಜ್ಯ ಬೆಳೆಯಾದ ಕಡಲೆಯನ್ನು 7,495 ಹೆಕ್ಟರ್ ಪ್ರದೇಶದಲ್ಲಿ ಅಂದರೆ ಸುಮಾರು 18737 ಎಕರೆ ಜಮೀನಿನಲ್ಲಿ ಬೆಳೆಯಲಾಗಿದೆ.
ಈಗ ಕಡಲೆ ಬೆಳೆಯ ಉತ್ಪನ್ನವನ್ನು ರೈತರು ತೆಗೆಯಲಾರಂಭಿಸಿದ್ದು ಮುಕ್ತ ಮಾರುಕಟ್ಟೆಯಲ್ಲಿ ರೈತರು ಕೈಗೆ ಬಂದ ಬೆಲೆಯಲ್ಲಿ ಮಾರುತ್ತಿದ್ದಾರೆ ಇದಕ್ಕೆ ಕಾರಣವೆಂದರೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ತಡವಾಗಿ ಆರಂಭಿಸಿ 45 ದಿನಗಳ ಕಾಲ ರೈತರ ಹೆಸರು ನೋಂದಾಯಿಸಲು ನೀಡಿರುವುದು ಹಾಗೂ ಅನೇಕ ಕಾರಣಗಳಿಂದ ರೈತರು ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಹಿಂದೇಟು ಹಾಕುತ್ತಿದ್ದಾರೆ.
ತಾಲೂಕಿನ ಯಳವತ್ತಿ ಅಡರಕಟ್ಟಿ ಮತ್ತು ಲಕ್ಷ್ಮೇಶ್ವರದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಆರಂಭಿಸಿದ್ದು 3 ಕೇಂದ್ರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ರೈತರು ಹೆಸರು ನೋಂದಾಯಿಸಿಲ್ಲ. ದೊರೆತಿರುವ ಮಾಹಿತಿಯ ಪ್ರಕಾರ ಯಳವತ್ತಿ ಕೇಂದ್ರದಲ್ಲಿ ಸುಮಾರು 460 ರೈತರು ಅಡರಕಟ್ಟಿ ಕೇಂದ್ರದಲ್ಲಿ ಸುಮಾರು 300 ರೈತರು ಲಕ್ಷ್ಮೇಶ್ವರ ಕೇಂದ್ರದಲ್ಲಿ ಕೇವಲ 180 ರೈತರು ಹೆಸರನ್ನು ನೋಂದಾಯಿಸಿದ್ದಾರೆ.
ಇದಕ್ಕೆ ಕಾರಣವೆಂದರೆ ಕೇಂದ್ರ ಸರ್ಕಾರದ ಹಲವು ನಿರ್ಬಂಧಗಳು ರೈತರನ್ನು ಕೇಂದ್ರದತ್ತ ಸುಳಿ ಯದಂತೆ ಮಾಡಿವೆ ಪ್ರಮುಖವಾಗಿ ಎಫ್ ಎ ಕ್ಯೂ ಮಾದರಿಯ ಕಡಲೆಯನ್ನು ಮಾತ್ರ ಖರೀದಿ ಮಾಡುತ್ತಿದೆ ಆದರೆ ರೈತರು ಕಡಲೆಯನ್ನು ಸಂಪೂರ್ಣ ಒಣಗಿದ ನಂತರವೇ ಫಸಲ ತೆಗೆಯುತ್ತಿದ್ದು ಆದರೆ ಖರೀದಿ ಕೇಂದ್ರದಲ್ಲಿ ನೀಡಿದರೆ ಎಲ್ಲಿ ಬ್ಯಾಂಕುಗಳು ತಮ್ಮ ಸಾಲದ ಖಾತೆಗೆ ಹಣವನ್ನು ಜಮೆ ಮಾಡಿಕೊಳ್ಳುತ್ತಿದ್ದೇವೆ ಎಂಬ ಭಯ ಒಂದು ಕಡೆ ಆದರೆ ಇನ್ನೊಂದು ತಿಂಗಳಾನುಗಟ್ಟಲೆ ರೈತರು ಹಣಕ್ಕಾಗಿ ಜಾತಕ ಪಕ್ಷಗಳಂತೆ ಕಾಯಬೇಕಾಗುತ್ತದೆ.
ಈ ಎಲ್ಲ ಕಾರಣಗಳಿಂದ ರೈತರು ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಪಕ್ಷಾತೀತ ರೈತಪರ ಹೋರಾಟ ವೇದಿಕೆಯ ಅಧ್ಯಕ್ಷ ಮಹೇಶ್ ಹೊಗೆಸೊಪ್ಪಿನ ಮತ್ತು ಜೆಡಿಎಸ್ ನ ಪದ್ಮರಾಜ್ ಗೌಡ ಪಾಟೀಲ್ ಅವರು ಕೇಂದ್ರ ಸರ್ಕಾರಕ್ಕೆ ನಿಜವಾಗಲೂ ರೈತರ ಬಗ್ಗೆ ಕಳಕಳಿ ಆಸಕ್ತಿ ಇದ್ದರೆ ರೈತರಿಂದ ಕರೆಯಿಸಿದ ಕಡಲೆಗೆ 15 ದಿನಗಳೊಳಗಾಗಿ ಹಣ ನೀಡುವ ವ್ಯವಸ್ಥೆಯನ್ನು ಮಾಡಬೇಕು ಮತ್ತು ಬ್ಯಾಂಕುಗಳಿಗೆ ರೈತರ ಯಾವುದೇ ಹಣಗಳಿಗೆ ಕತ್ತರಿ ಹಾಕದಂತೆ ಸರ್ಕಾರ ತಾಕಿತು ಮಾಡಬೇಕು ಎಂದಿದ್ದಾರೆ.