
ಕುಂದಗೋಳ ಮಾ4 : ಚಿಕ್ಕಬಳ್ಳಾಪುರದಲ್ಲಿ ಮಾ. 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ ಸಹಾಯಕಾರಿ ‘ಅಭಾ’ ಕಾರ್ಡ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕುಂದಗೋಳ ಸೇರಿದಂತೆ ತಾಲೂಕಿನ ಪ್ರತಿ ಗ್ರಾಮದ ಸಾರ್ವಜನಿಕರು ‘ಅಭಾ’ ಕಾರ್ಡ್ ಪಡೆಯಲು ತಮ್ಮ ಹೆಸರು ನೋಂದಾಯಿಸಲು ಮುಂದಾಗಬೇಕು ಎಂದು ಗ್ರಾಮ ಒನ್ ಕಾರ್ಯಕರ್ತರಾದ ಸಂಜೀವ ಗೋಮಪ್ಪನವರ ಹಾಗೂ ಉಮೇಶ ಗುಡಗೇರಿ ಅವರು ಜನತೆಯಲ್ಲಿ ಮನವಿ ಮಾಡಿದರು.
ಕುಂದಗೋಳ ಕಿಲ್ಲಾ ಓಣಿಯಲ್ಲಿ ವಿವಿಧೆಡೆ ಶುಕ್ರವಾರ ಅಭಾ ಕಾರ್ಡ್ ಪಡೆಯಲು ಸಾರ್ವಜನಿಕರ ನೋಂದಣಿಯನ್ನು ಆರಂಭಿಸಿ ಮಾತನಾಡಿ ಈಗಾಗಲೇ ತೆಗ್ಗಿನಕೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ 400 ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿದ್ದು, ಒಂದೇ ದಿನದಲ್ಲಿ 315 ಜನರ ನೋಂದಣಿಗಾಗಿ ಈ ಪ್ರದೇಶದ ಆಶಾ ಕಾರ್ಯಕರ್ತೆ ಮಂಜುಳಾ ಹೊಸೂರ ಅವರು ಪರಿಶ್ರಮ ಪಟ್ಟಿದ್ದು, ಅವರ ಒಂದೇ ಪ್ರದೇಶದಲ್ಲಿ ಒಟ್ಟು ಸಾವಿರಕ್ಕೂ ಹೆಚ್ಚು ಜನರ ನೋಂದಣಿ ಆಗಿದೆ ಎಂದು ಹರ್ಷ ವ್ಯಕ್ತಪಡಿಸುತ್ತ, ಇದೇ ರೀತಿ ಕುಂದಗೋಳ ಸೇರಿದಂತೆ ತಾಲೂಕಿನಾದಾದ್ಯಂತ ಎಲ್ಲರೂ ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ಮಾ. 17 ರ ನಂತರ ತಮ್ಮ ತಮ್ಮ’ಅಭಾ’ ಕಾರ್ಡ್ ಪಡೆಯಬೇಕು ಎಂದು ಮಾಹಿತಿ ನೀಡಿದರು.
ಕಿಲ್ಲಾ ಓಣಿ ನಿವಾಸಿ ವಸಂತ ಚವ್ಹಾಣ ಅವರು ಸಂತಸ ವ್ಯಕ್ತಪಡಿಸಿ ನಮ್ಮ ಪ್ರದೇಶದ ಆಶಾ ಕಾರ್ಯಕರ್ತೆ ಮಂಜುಳಾ ಅವರು ಪ್ರತಿ ಮನೆಮನೆಗೆ ತೆರಳಿ, ಅಭಾ ಕಾರ್ಡ್ ಬಗ್ಗೆ ತಿಳುವಳಿಕೆ ನೀಡಿ, ಹೆಸರು ನೋಂದಾಯಿಸಲು ಪ್ರೇರೇಪಿಸುತ್ತಿದ್ದಾರೆ ಎಂದರು.
ಆಶಾ ಕಾರ್ಯಕರ್ತೆ ಮಂಜುಳಾ ಹೊಸೂರ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡು ನಿಸ್ವಾರ್ಥ ಸೇವೆ, ಸದಾ ಕಾರ್ಯಪ್ರವರ್ತತೆ, ನಿಷ್ಠೆಯಿಂದ ದುಡಿದರೆ ಜೀವನಕ್ಕೆ ನೆಮ್ಮದಿ ಸಾಧ್ಯವಾಗಿದ್ದು, ನಮ್ಮ ಕಾರ್ಯಕ್ಕೆ ಸದಾ ಸಹಕಾರ ನೀಡುವ ಪ. ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಸಾರ್ವಜನಿಕರಿಗೆ ಧನ್ಯವಾದ ಎಂದರು.