ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ :  ರಂಭಾಪುರಿ ಶ್ರೀ

oplus_0

ಸಂಜೆವಾಣಿ ವಾರ್ತೆ

ಅಜ್ಜಂಪುರ- ಮೇ.೨೦; ನಾಡು ನುಡಿಗಳ ಬಗೆಗೆ ಎಲ್ಲರಲ್ಲಿ ಸ್ವಾಭಿಮಾನ ಬೆಳೆದು ಬರುವ ಅವಶ್ಯಕತೆಯಿದೆ. ಸ್ವಾಭಿಮಾನ ಇಲ್ಲದಿದ್ದರೆ ಏನನ್ನು ಸಾಧಿಸಲು ಸಾಧ್ಯವಾಗದು. ಕರ್ನಾಟಕ ಹೆಸರಾಯಿತು ಆದರೆ ಉಸಿರಾಗಬೇಕು ಕನ್ನಡ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ತಾಲೂಕಿನ ಕಾಟಿಗನೆರೆ ಗ್ರಾಮದಲ್ಲಿ ಜರುಗಿದ ಅಜ್ಜಂಪುರ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಅಭಿವೃದ್ಧಿಪಡಿಸುವುದನ್ನು ಯಾರೂ ನಿರ್ಲಕ್ಷö್ಯ ಮಾಡಬಾರದು. ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಸೊರಗುತ್ತಿರುವುದು ನೋವಿನ ಸಂಗತಿ. ಕನ್ನಡ ಭಾಷೆಯಲ್ಲಿರುವ ಸೊಗಡು ಸೌಂದರ್ಯ ಬೇರೆಲ್ಲಿಯೂ ಕಾಣಲಾಗದು. ಕರ್ನಾಟಕದ ಗಡಿ ಭಾಗಗಳಲ್ಲಿ ಕನ್ನಡ ಶಾಲೆಗಳು ಕ್ಷೀಣಿಸುತ್ತಿವೆ. ಅವುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ತ್ವರಿತವಾಗಿ ಆಗಬೇಕಾಗಿದೆ. ದಿನ ನಿತ್ಯದಲ್ಲಿ ಕನ್ನಡ ಬಳಕೆ ಕಲಿಕೆ ಹಾಗೂ ಪ್ರೋತ್ಸಾಹ ಸಿಗುವಂತಾಗಬೇಕು. ಹೆತ್ತ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಇಂಗ್ಲೀಷ ಕಾನ್ವೆಂಟ ಸ್ಕೂಲಿಗೆ ಕಳಿಸುವರೆಷ್ಟೋ ಜನರಿದ್ದಾರೆ. ಕನ್ನಡ ಶಾಲೆಯಲ್ಲಿ ಓದಲು ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪರ ಸಂಘಟನೆಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಅಜ್ಜಂಪುರ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಒಂದು ಸಣ್ಣ ಕಾಟಿಗನೆರೆ ಗ್ರಾಮದಲ್ಲಿ ಜರುಗುತ್ತಿರುವುದು ಸಂತೋಷದ ಸಂಗತಿ. ನಿವೃತ್ತ ಶಿಕ್ಷಕ ಜಿ.ಉಮಾಪತಿ ಆರಾಧ್ಯರ ಕನ್ನಡ ಭಾಷಾಭಿಮಾನ ಚಿಂತನೆ ಈ ಸಮಾರಂಭಕ್ಕೆ ಸ್ಫೂರ್ತಿಯಾಗಿದೆ ಎಂದರು.