ಹೆಲ್ಮೇಟ್ ಇಲ್ಲದೆ ಬೈಕ್ ಓಡಿಸುವುದು ಜೀವಕ್ಕೆ ಅಪಾಯ: ಎಸ್.ಪಿ

ಬೀದರ್: ಜೂ.27:ಹೆಲ್ಮೇಟ್ ಇಲ್ಲದೆ ಬೈಕ್ ಓಡಿಸುವುದು ತಮ್ಮ ಜೀವಕ್ಕೆ ಅಪಾಯ ತಂದುಕೊಡುವಂತಾಗುತ್ತದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾದಿಕಾರಿ ಚೆನ್ನಬಸವಣ್ಣ ಲಂಗೋಟಿ ಹೇಳಿದರು.

ಅವರು ಸೋಮವಾರ ನಗರದ ರಮೇಶ ಆಟೋ ಹೊಂಡಾ ಶೋ ರೂಮ್‍ನಲ್ಲಿ ನೂತನ ಮಾರುಕಟ್ಟೆಗೆ ಬಂದಿರುವ ‘ಹೊಂಡಾ ಶೈನ್’ ಬೈಕ್ ಬಿಡುಗಡೆ ಮಾಡಿ ಮಾತನಾಡಿ, ರಸ್ತೆ ಅಪಘಾತದಲ್ಲಿ ಸಾವನಪ್ಪುವವರಲ್ಲಿ ಸುಮಾರು 5 ಪಟ್ಟು ಜನ ಬೈಕ್ ಸವಾರರೆ ಇರುತ್ತಾರೆ ಹಾಗಾಗಿ ಬೈಕ್ ಸವಾರರರು ಎಲ್ಲ ದಾಖಲಾತಿಗಳೊಂದಿಗೆ ಹೆಲ್ಮೇಟ್ ಧರಿಸಿದ್ದರೆ ಉತ್ತಮ ಎಂದರು.

ಬೀದರ್ ಜಿಲ್ಲೆಯಲ್ಲಿಯೇ ಕಳೆದ 6 ತಿಂಗಳಿನಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 145 ಜನರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಇಂದಿನ ಕಾಲದಲ್ಲಿ ಬೈಕ್ ಎಲ್ಲರಿಗೂ ಅನಿವಾರ್ಯವಾಗಿದೆ. ಹೀಗಾಗಿ ಶೋ ರೂಮ್‍ಗೆ ಬರುವ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿಗಳು ಕೂಡ ಬೈಕ್ ಸವಾರರು ಹೆಲ್ಮೇಟ್ ಯಾಕೆ ಧರಿಸಬೇಕು ಇದರಿಂದ ಏನು ಲಾಭ ಎಂಬುದರ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ಕಂಪನಿಯ ಉತ್ತರ ಕರ್ನಾಟಕದ ಕ್ಷೇತ್ರ ಉಸ್ತುವಾರಿ ಸಾಯಿ ಕೃಷ್ಣಾ ಮಾತನಾಡಿ, ನೂತನ ಹೊಂಡಾ ಶೈನ್ ಬೈಕ್‍ನಲ್ಲಿರುವ ವೈಶಿಷ್ಟ್ಯತೆ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶೊ ರೂಮ್ ಮಾಲಿಕ ರಮೇಶ ಗೋಯಲ್, ವ್ಯವಸ್ಥಾಪಕ ನಿರ್ದೇಶಕ ಪ್ರವೀಣ ಗೋಯಲ್, ನಿತೀನ ಗೋಯಲ್, ಸಂಚಾರಿ ಸಿಪಿಐ ಕಪೀಲ್, ಹೊಂಡಾ ಶೋ ರೂಮ್‍ನ ಸಿಬ್ಬಂದಿಗಳು ಹಾಗೂ ಮತ್ತಿತರರು ಇದ್ದರು.