ಹೆಲ್ಮೆಟ್ ಧರಿಸಿ ಅಮೂಲ್ಯ ಜೀವನವನ್ನು ಉಳಿಸಿಕೊಳ್ಳಿ- ಬಿ.ಟಿ ಕುಮಾರಸ್ವಾಮಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೧೯; ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಪ್ರತಿಯೊಬ್ಬ ನಾಗರಿಕರು ಹೆಲ್ಮೆಟ್ ಧರಿಸಬೇಕು ಮತ್ತು ತಮ್ಮ ಅಮೂಲ್ಯವಾದ ಜೀವನವನ್ನು ಉಳಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ ಹೇಳಿದರು.ಚಿತ್ರದುರ್ಗ ಜಿಲ್ಲಾ ಪೊಲೀಸ್ ಮತ್ತು ನಾಗರಿಕ ಬಂದೂಕು ತರಬೇತಿ ಶಿಭಿರಾರ್ಥಿಗಳ ಸಹಯೋಗದೊಂದಿಗೆ ಶುಕ್ರವಾರ ನಗರದ ಒನಕೆ ಓಬವ್ವ ವೃತ್ತದಲ್ಲಿ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಧರಿಸುವ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರತಿಯೊಬ್ಬರ ಜೀವ ಅಮೂಲ್ಯವಾದ್ದು, ನಿಮ್ಮನ್ನು ನಂಬಿಕೊಂಡು ಇಡೀ ಕುಟುಂಬ ಹಾಗೂ ಸಂಬಧಿಗಳು ನಿಮ್ಮ ಮೇಲೆ ಅವಲಂಬಿತರಾಗಿರುತ್ತಾರೆ. ಹೆಲ್ಮೆಟ್ ಧರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ. ಎಲ್ಲಾ ನಾಗರಿಕರು ಹಾಗೂ ದ್ವಿಚಕ್ರ ವಾಹನ ಸವಾರರು ತಪ್ಪದೆ ಹೆಲ್ಮೇಟ್ ಧರಿಸಿಕೊಂಡು ವಾಹನವನ್ನು ಚಲಾಯಿಸಬೇಕು ಎಂದು ತಿಳಿಸಿದರು.ಹೆಲ್ಮೆಟ್ ಜಾಗೃತಿ ಜಾಥವು ಒನಕೆ ಓಬವ್ವ ವೃತ್ತದಿಂದ ಆರಂಭಗೊಂಡು ಅಂಬೇಡ್ಕರ್ ವೃತ್ತ, ಬಿ.ಡಿ ರಸ್ತೆ ಮೂಲಕ ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕನಕ ವೃತ್ತ ತಲುಪಿತು.  ಜಾಥದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿ ಕುಮಾರಸ್ವಾಮಿ, ಪೊಲೀಸ್ ಸಿಬ್ಬಂದಿಗಳು ಹಾಗೂ ನಾಗರಿಕ ಬಂದೂಕು ತರಬೇತಿ ಶಿಭಿರಾರ್ಥಿಗಳು ಪಾಲ್ಗೊಂಡಿದ್ದರು.