ಹೆಲ್ಮೆಟ್ ಇಲ್ಲದ ಸಂಚಾರ ಜೀವಕ್ಕೆ ಸಂಚಕಾರ – ಸಿಪಿಐ ಸುರೇಶ ತಳವಾರ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ.17 :- ಬೈಕ್ ಸವಾರರು ಹೆಲ್ಮೆಟ್ ಇಲ್ಲದೆ  ಸಂಚಾರ ಮಾಡುವುದರಿಂದ ಆಕಸ್ಮಿಕ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ  ತಮ್ಮ ಅಮೂಲ್ಯವಾದ ಜೀವಕ್ಕೆ ಸಂಚಕಾರ ತಂದು ಕೊಳ್ಳುವ ಮೊದಲು ಜಾಗರುಕರಾಗಿ ಹೆಲ್ಮೆಟ್ ಧರಿಸಿ  ಜೀವ ಉಳಿಸಿಕೊಳ್ಳುವಂತೆ ಕೂಡ್ಲಿಗಿ ಸಿಪಿಐ ಸುರೇಶ ತಳವಾರ ಸಾರ್ವಜನಿಕರಲ್ಲಿ ಜಾಗೃತಿ ಸಂದೇಶ ನೀಡಿದರು.
ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಾರ್ಗದರ್ಶನದಲ್ಲಿ ಕೂಡ್ಲಿಗಿ ಸಿಪಿಐ  ಸುರೇಶ ತಳವಾರ ನೇತೃತ್ವದಲ್ಲಿ ಇಂದು ಬೆಳಿಗ್ಗೆ  ಪಟ್ಟಣದ ಶ್ರೀ ಬಸವೇಶ್ವರ ವೃತ್ತದಿಂದ ಹೆಲ್ಮೆಟ್ ಜಾಗೃತಿ ಕುರಿತು ಕೂಡ್ಲಿಗಿ ಹಾಗೂ ಗುಡೇಕೋಟೆ ಪಿಎಸ್ಐ ಹಾಗೂ ಸಿಬ್ಬಂದಿಗಳು ಹೆಲ್ಮೆಟ್ ಧರಿಸಿ ಅಂಬೇಡ್ಕರ್ ವೃತ್ತ, ಹಳೇ ಸಂತೆಮೈದಾನ, ಕೊತ್ತಲಾಂಜನೇಯ ದೇವಸ್ಥಾನದ ಮುಂದಿನ ರಸ್ತೆ ಮೂಲಕ  ಬೈಕ್ ಸವಾರಿ ನಡೆಸಿ  ನಂತರ ಮದಕರಿ ವೃತ್ತದ ಬಳಿ ನಿಂತು  ಜನರಲ್ಲಿ ಹೆಲ್ಮೆಟ್ ಹಾಗೂ ರಸ್ತೆ ಸುರಕ್ಷೆ ಕುರಿತಾಗಿ ಸಿಪಿಐ ಮಾತನಾಡುತ್ತ ಜನತೆ ರಸ್ತೆ ನಿಯಮ ಪಾಲನೆ ಮಾಡದೆ ಅದರಲ್ಲಿ ಹೆಲ್ಮೆಟ್ ಬಳಕೆ ಮಾಡದೆ ಇರುವ ಬೈಕ್ ಸವಾರರು ಗಂಟೆಗೆ 70ಜನರು ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದೂ ಇದನ್ನು ತಪ್ಪಿಸಲು ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡಲು ಪೊಲೀಸ್ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೂ ರಸ್ತೆ ನಿಯಮ, ವಾಹನಗಳ ಸ್ಪೀಡ್ ಲೆವೆಲ್ ಅರಿತುಕೊಳ್ಳಬೇಕು ಮತ್ತು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವುದರಿಂದ ಆಕಸ್ಮಿಕ ಅಪಘಾತವಾದಲ್ಲಿ ತಲೆಗೆ ಸುರಕ್ಷೆಯಾಗಿ ಹೆಲ್ಮೆಟ್ ಇರುವುದರಿಂದ ಸಾವಿನಿಂದ ಪಾರಾಗಿ ಕೈ ಕಾಲುಗಳಿಗೆ ಪೆಟ್ಟಾಗಬಹುದು ಆದರೆ ಹೆಲ್ಮೆಟ್ ನಿಂದ ಜೀವ ಉಳಿಯಲಿದೆ ಇದನ್ನು ಬೈಕ್ ಸವಾರರು ಅರಿತುಕೊಂಡು ಹೆಲ್ಮೆಟ್ ಧರಿಸಿ ತಮ್ಮ ಪ್ರಾಣ ಉಳಿಸಿಕೊಳ್ಳುವಂತೆ ಅರಿತುಕೊಳ್ಳಿ ಎಂದು ಸಿಪಿಐ ಸುರೇಶ ತಳವಾರ್ ತಿಳಿಸಿ ಅಲ್ಲಿ ನೆರೆದಿದ್ದ ಆಟೋ ಸೇರಿದಂತೆ ಇತರೆ ವಾಹನ ಚಾಲಕರಿಗೆ ರಸ್ತೆ ನಿಯಮ, ಸ್ಪೀಡ್ ಲೆವೆಲ್ ನ ಚಾಲನೆ ಕುರಿತು ಮತ್ತು ಅಪಘಾತ ತಡೆಗಟ್ಟುವ ಕುರಿತು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ಪಿಎಸ್ಐ ಧನುಂಜಯ, ಗುಡೇಕೋಟೆ ಪಿಎಸ್ಐ ಪ್ರಕಾಶ ಸಿ, ಕೂಡ್ಲಿಗಿ ಎಎಸ್ ಐ ಮೋಹನ್, ಬಸವರಾಜ ಹಾಗೂ ಸಿಬ್ಬಂದಿಗಳು ಸೇರಿ ಹೆಲ್ಮೆಟ್ ಧರಿಸಿ ಬೈಕ್ ಸವಾರಿ ನಡೆಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಸ್ತೆ ಸುರಕ್ಷಾ ಕುರಿತು ಕಡ್ಡಾಯ ಹೆಲ್ಮೆಟ್ ಧರಿಸುವ ಕುರಿತು ಜನರಿಗೆ ಜಾಗೃತಿ ಮೂಡಿಸಲಾಯಿತು.