ಹೆಲಿಕ್ಯಾಪ್ಟರ್ ದುರಂತ ಬದುಕುಳಿದ ವರುಣ್ ಚೇತರಿಕೆಗೆ ಪ್ರಾರ್ಥನೆ

ನವದೆಹಲಿ, ಡಿ ೯- ಭಾರತೀಯ ವಾಯುಪಡೆಯ ಎಂಐ-೧೭ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರ್ ಪ್ರದೇಶದಲ್ಲಿ ನಿನ್ನೆ ಪತನಗೊಂಡು ಸಂಭವಿಸಿದ ದುರಂತದಲ್ಲಿ ಬದುಕುಳಿದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಚೇತರಿಕೆಗೆ ಎಲ್ಲೆಡೆ ಪ್ರಾರ್ಥನೆ ನಡೆದಿದೆ.

.ಹೆಲಿಕಾಪ್ಟರ್ ಅಪಘಾತದ ನಂತರ, ತೀವ್ರ ಬೆಂಕಿ ಕಾಣಿಸಿಕೊಂಡಿದ್ದರಿಂದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ದೇಹದಲ್ಲಿ ತೀವ್ರ ಸುಟ್ಟ ಗಾಯಗಳಾಗಿವೆ. ಇದೀಗ ಅವರಿಗೆ ವೆಲ್ಲಿಂಗ್ಟನ್‌ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಾರಿಯ ಸ್ವಾತಂತ್ರ್ಯ ದಿನದಂದು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶೌರ್ಯ ಚಕ್ರವನ್ನು ಪ್ರದಾನ ಮಾಡಿ ಗೌರವಿಸಿದ್ದಾರೆ. ಕಳೆದ ವರ್ಷ ಹಾರಾಟದ ಸಮಯದಲ್ಲಿ, ತೇಜಸ್ ಯುದ್ಧ ವಿಮಾನದಲ್ಲಿ ತಾಂತ್ರಿಕ ದೋಷ ಎದುರಾಗಿತ್ತು. ಈ ಸಂದರ್ಭದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ದೋಷದ ಹೊರತಾಗಿಯೂ, ತಮ್ಮ ಯುದ್ಧ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದರು. ಈ ಧೈರ್ಯಶಾಲಿ ಕಾರ್ಯಕ್ಕಾಗಿ, ಅವರಿಗೆ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು.

ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರುದ್ರಪುರ ತಾಲೂಕಿನ ಕನ್ಹೋಲಿ ಗ್ರಾಮದವರು. ಪ್ರಸ್ತುತ ವರುಣ್ ಸಿಂಗ್ ಅವರು, ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ ನಿರ್ದೇಶಕರಾಗಿದ್ದಾರೆ. ವರುಣ್ ಸಿಂಗ್ ತಂದೆ ಕರ್ನಲ್ ಕೆಪಿ ಸಿಂಗ್ ಕೂಡ ಸೇನೆಯಿಂದ ನಿವೃತ್ತರಾಗಿದ್ದಾರೆ. ಪ್ರಸ್ತುತ ಅವರ ಕುಟುಂಬವು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವಾಸಿಸುತ್ತಿದೆ.