ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ

ಕನಕಪುರ, ಜು೨೫: ಹಾರಾಡುತ್ತಿದ್ದ ಹೆಲಿಕಾಪ್ಟರ್‌ವೊಂದು ದಿಢೀರ್ ಎಂದು ತುರ್ತು ಭೂಸ್ಪರ್ಶ ಮಾಡಿದ ಘಟನೆ ನಗರದ ಎಸ್.ಬಿ.ಕಲ್ಯಾಣ ಮಂಟಪದ ಹಿಂಭಾಗದಲ್ಲಿ ನಡೆಯಿತು.
ಬೆಳಿಗ್ಗೆ ಸುಮಾರು ೯ ಗಂಟೆ ಸಮಯದಲ್ಲಿ ಎಸ್.ಬಿ.ಕಲ್ಯಾಣ ಮಂಟಪದ ಸಮೀಪದಲ್ಲಿ ಕೈಗೆಟುವ ರೀತಿಯಲ್ಲಿ ಹಾರಾಟ ಮಾಡುತ್ತಿರುವುದನ್ನು ನೋಡಿದ ಜನತೆ ಏಕೆ ಹೆಲಿಕಾಪ್ಟರ್ ಈ ರೀತಿ ಹಾರಾಟ ಮಾಡುತ್ತಿದೆ ಏನಾದರೂ ಸಮಸ್ಯೆಯಿರಬಹುದ ಎಂದು ಕುತೂಹಲದಿಂದ ನೋಡು ನೋಡುತ್ತಿದ್ದಂತೆ ಭೂಸ್ಪರ್ಶ ಮಾಡಿತು.
ಹೆಲಿಕಾಪ್ಟರ್‌ನಲ್ಲಿ ಏನೋ ತಾಂತ್ರಿಕದೋಷ ಕಾಣಿಸಿಕೊಂಡು ಹಾರಾಟ ನಡೆಸಲಾಗದೆ ಅಪಘಾತಕ್ಕೀಡಾಗಿ ಕೆಳಗೆ ಬಿದ್ದಿದೆ ಎಂಬ ಸುದ್ದಿ ನಗರದಲ್ಲಿ ಕಾಡ್ಗಿಚ್ಚಿನಂತೆ ಹರಡಿ ಸಾವಿರಾರು ಸಂಖ್ಯೆಯಲ್ಲಿ ಹೆಲಿಕ್ಯಾಪ್ಟರ್ ಭೂಸ್ಪರ್ಶ ಮಾಡಿದ ಜಾಗಕ್ಕೆ ಕ್ಷಣಮಾತ್ರದಲ್ಲಿ ಜನ ಜಮಾವಣೆಗೊಂಡರು.
ಆದರೆ ಹೆಲಿಕಾಪ್ಟರ್ ಚಲಾಯುಸುತ್ತಿದ್ದ ಪೈಲೆಟ್‌ಗಳು ಸುರಕ್ಷಿತವಾಗಿ ಇಳಿಸಲು ಸೂಕ್ತ ಜಾಗಕ್ಕಾಗಿ ಪರಿಶೀಲನೆ ನಡೆಸಿ ಯಾರು ಇಲ್ಲದ ವಿಶಾಲವಾದ ಪ್ರದೇಶವನ್ನು ನೋಡಿ ಕೆಳಗೆ ಇಳಿಸಿದ್ದಾರೆ. ಅಗಾಧ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ನೋಡಿದ ಪೈಲೆಟ್‌ಗಳು ಅರ್ಧ ತಾಸಿನಲ್ಲೇ ಹೆಲಿಕಾಪ್ಟರ್‌ನ್ನು ಸರಿಪಡಿಸಿಕೊಂಡು ಮತ್ತೆ ಮೇಲಕ್ಕೆ ಹಾರಾಟ ಮಾಡಿ ಬೆಂಗಳೂರಿನ ಕಡೆ ಹೊರಟರು.
ಕನಕಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಹೆಲಿಕಾಪ್ಟರ್ ಬೆಂಗಳೂರಿನಿಂದ ತಮಿಳುನಾಡಿನ ಚೆನ್ನೈಗೆ ಪ್ರಯಾಣ ಬೆಳೆಸಿದ್ದ ಬೆಂಗಳೂರಿನ ಮಿಲಿಟರಿ ತರಬೇತಿ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಎಂದು ತಿಳಿದು ಬಂದಿದೆ. ಅದರಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿದ್ದ ಇಬ್ಬರು ಕಮಾಂಡೋಗಳಿದ್ದು ಹೆಲಿಕಾಪ್ಟರ್‌ನಲ್ಲಿ ಏನು ಸಮಸ್ಯೆಯಾಗಿತ್ತು ಎಂಬುದರ ಬಗ್ಗೆ ತಿಳಿದುಬಂದಿಲ್ಲ.