ಹೆರಾಲ್ಡ್ ಪ್ರಕರಣ ಮುಚ್ಚಿ ಹಾಕಲು ಕೈ ಯತ್ನ: ಸಿ.ಟಿ. ರವಿ ಆರೋಪ

ಬೆಂಗಳೂರು, ಜು.17- ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಮಾಯಕರಲ್ಲ. ಆದರೆ ಜನ ಸೇರಿಸಿ ಪ್ರಕರಣ ಮುಚ್ಚಿ ಹಾಕಲು ಕಾಂಗ್ರೆಸ್ ಹೊರಟಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಧನಾಲಯ ನೋಟಿಸ್ ನೀಡಿದೆ. ಆದರೆ ಈ ಕ್ರಮ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಹೋರಾಟ ಮಾಡುತ್ತಿದೆ.ಕಾಂಗ್ರೆಸ್‍ನವರಿಗೆ ಸಂವಿಧಾನಬದ್ಧ ಸಂಸ್ಥೆಗಳ ಮೇಲೆ ಗೌರವವಿಲ್ಲ. ಗೌರವ ಇದ್ದಿದ್ದರೆ ಇಡಿ ನೋಟಿಸ್ ಯಾಕೆ ಕೊಟ್ಟಿದೆ ಅಂತ ಅರ್ಥ ಮಾಡಿಕೊಳ್ಳುತ್ತಿದ್ದರು.ಆದರೆ ಕಾಂಗ್ರೆಸ್ ನಾಯಕರು ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ರೀತಿಯಲ್ಲಿ ಹೆರಾಲ್ಡ್ ಪ್ರಕರಣದಲ್ಲಿ ನಡೆದುಕೊಂಡಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಕಾಂಗ್ರೆಸ್ ವರ್ತನೆಯನ್ನು ತರಾಟೆಗೆ ತೆಗೆದುಕೊಂಡರು.
ಇಡಿ ಸಂವಿಧಾನಬದ್ಧವಾಗಿ ತನಿಖೆ ನಡೆಸುತ್ತಿದೆ. ಮೋದಿಯವರ ಮೇಲೆ ಆರೋಪ ಬಂದಾಗ ಹೇಗೆ ನಡೆದುಕೊಂಡ್ರು ಅಂತ ನೋಡಿ ಕಲಿತುಕೊಳ್ಳಿ. ಸತತ 7 ಗಂಟೆ ಕಾಲ ಮೋದಿಯವರು ಎಸ್‍ಐಟಿ ವಿಚಾರಣೆಗೆ ಹಾಜರಾಗಿದ್ದರು. ಕಾಂಗ್ರೆಸ್‍ನವರ ಥರ ಮೋದಿಯವರು ನಾಟಕ ಆಡಲಿಲ್ಲ ಎಂದು ತಿರುಗೇಟು ನೀಡಿದರು.
ಬಹುತೇಕ ಶಾಸಕರು, ಸಚಿವರು ಕ್ಷೇತ್ರ ವೀಕ್ಷಣೆ ಮಾಡಿಯೇ ಬಂದಿದ್ದಾರೆ. ಹಲವರು ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಕ್ಷೇತ್ರದಲ್ಲಿ ಜನರಿಗೆ ಸಮಸ್ಯೆ ಆಗದ ರೀತಿ ಕ್ರಮ ವಹಿಸಿದ್ದಾರೆ ಎಂದು ರವಿ ಹೇಳಿದರು.