ಹೆಮ್ಮೆಯಿಂದ ಸಂವಿಧಾನದ ಪೀಠಿಕೆ ಓದೋಣ- ಅನಿಲ್ ಕುಮಾರ್


ಸಂಜೆವಾಣಿ ವಾರ್ತೆ
ಸಂಡೂರು, ಸೆ.16: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಬೇಕು, ಕಾರಣ ಇಡೀ ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಅದಕ್ಕೆ ಕಾರಣ ನಮ್ಮ ಸಂವಿಧಾನ ಎನ್ನುವುದನ್ನು ನಾವು ಮರೆಯಬಾರದು ಎಂದು ತಹಶೀಲ್ದಾರ್ ಅನಿಲ್ ಕುಮಾರ್ ತಿಳಿಸಿದರು.
ಅವರು ಇಂದು ಪಟ್ಟಣದ ಎ.ಪಿ.ಎಂ.ಸಿ. ಸರ್ಕಾರಿ ಪ್ರೌಢಶಾಲಾ ಅವರಣದಲ್ಲಿ ತಾಲೂಕು ಮಟ್ಟದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಉದ್ಘಾಟಿಸಿ ಮಾತನಾಡಿ ದೇಶದ ಸ್ವಾತಂತ್ರ್ಯದ ಹೋರಾಟ ಪ್ರಮುಖವಾದರೆ ಅದರ ನಂತರದ ನಮ್ಮ ಬದುಕು ಹಸನಾಗಿಸಿದ್ದು ಸಂವಿಧಾನ ಕಾರಣ ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ , ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಸಂವಿಧಾನ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ, ಕಾರಣ ಇಡೀ ದೇಶ ಹಲವು ಭಾಷೆ, ವೇಷ, ಆಚರಣೆ, ಧರ್ಮಗಳಲ್ಲಿ ಭಿನ್ನತೆ ಹೊಂದಿದೆ, ವಿವಿಧತೆಯಲ್ಲಿ ಏಕತೆ ಎನ್ನುವ ನಾವು ಎಂದು ಏಕತೆಯ ಬದುಕನ್ನು ಸಾಗಿಸಲು ಸಾಧ್ಯವಾಗಿದ್ದು ಸಂವಿಧಾನ, ಅದಕ್ಕಾಗಿ ಅದರ ಪೀಠಿಕೆಯನ್ನು ಪ್ರತಿಯೊಬ್ಬರೂ ಅರಿಯುವುದು ಬಹು ಮುಖ್ಯ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಷಡಾಕ್ಷರಿ ಮಾತನಾಡಿ ಸಂವಿಧಾನದ ಪ್ರಸ್ತಾವನೆಯನ್ನು ನಾವೆಲ್ಲರೂ ತಿಳಿಯಲೇ ಬೇಕು ಎಂದು ಪೀಠಿಕೆಯ ಭಾಗವನ್ನು ತಿಳಿಸಿ ಭಾರತದ ಜನಗಳಾದ ನಾವು ಭಾರವನ್ನು ಒಂದು ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ, ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಅವರಲ್ಲಿ ಭ್ರಾತೃತ್ವಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ದಾಪೂರ್ವಕ ಸಂಕಲ್ಪ ಮಡಿದವರಾಗಿ ನಮ್ಮ ಸಂವಿಧಾನ ಸಭೆಯಲ್ಲಿ 1949ನೇಯ ಇಸವಿ ನವೆಮಬರ್ ತಿಂಗಳ 26ನೆಯ ದಿನಾಂಕ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು, ಶಾಸಕರ ಅಪ್ತಕಾರ್ಯದರ್ಶಿ ಎಸ್.ವಿ. ಹಿರೇಮಠ, ಎಲ್.ಹೆಚ್. ಶಿವಕುಮಾರ್, ಶಾಲೆಯ ಸಿಬ್ಬಂದಿಗಳು ಪಟ್ಟಣದ ವಿವಿಧ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದು ತಹಶೀಲ್ದಾರ್ ಅನಿಲ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.