ಹೆಬ್ಬಾಳ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಬದ್ಧ:ಕಟ್ಟಾ ಜಗದೀಶ್

ಬೆಂಗಳೂರು, ಮೇ ೮- ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್ ಕ್ಷೇತ್ರದ ಕುಂತಿಬೆಟ್ಟ ಭಾಗದಲ್ಲಿ ಪಾದಯಾತ್ರೆ ಮಾಡಿ ಮತಯಾಚಿಸಿದರು. ಆ ಬಳಿಕ ಕ್ಷೇತ್ರದ ಹಿರಿಯ ನಾಯಕರು, ಪ್ರಮುಖರನ್ನು ಭೇಟಿಯಾಗಿ ಬೆಂಬಲ ಕೋರಿದರು.
ಈ ಸಂದರ್ಭದಲ್ಲಿ ಕುಂತಿಬೆಟ್ಟ ಭಾಗದಲ್ಲಿ ಕುಡಿಯುವ ನೀರು, ಬೀದಿ ದೀಪದ ಸಮಸ್ಯೆ, ಕೆಟ್ಟ ರಸ್ತೆ ಮುಂತಾದ ಸಮಸ್ಯೆಗಳ ಬಗ್ಗೆ ಮತದಾರರು ಕಟ್ಟಾ ಜಗದೀಶ್ ಗಮನಕ್ಕೆ ತಂದರು.
ಬಿಜೆಪಿ ಅಭಿವೃದ್ಧಿಗೆ ಬದ್ಧವಾಗಿದೆ. ಹೆಬ್ಬಾಳದ ಶಾಸಕನಾಗಿ ನನ್ನನ್ನು ಚುನಾಯಿಸಿದರೆ ಕುಂತಿಬೆಟ್ಟದ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಹಾಗೆಯೇ ಕ್ಷೇತ್ರದಲ್ಲಿನ ಹಾಲಿ ಶಾಸಕರು ಅಭಿವೃದ್ಧಿ ಕೆಲಸಗಳ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದಾರೆ. ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಾಗಿ ಕ್ಷೇತ್ರಕ್ಕೆ ೧,೪೦೦ ಕೋಟಿ ರೂ. ನೀಡಿದ್ದರೂ ಸಹ ಹಾಲಿ ಶಾಸಕರು ಅದನ್ನು ಸೂಕ್ತವಾಗಿ ವಿನಿಯೋಗಿಸಿಲ್ಲ. ಇದರಿಂದಾಗಿ ಹೆಬ್ಬಾಳ ಅಭಿವೃದ್ಧಿಯಲ್ಲಿ ಹಿಂದುಳಿಯುವಂತಾಗಿದೆ ಎಂದು ಅವರು ಮತದಾರರ ಗಮನಕ್ಕೆ ತಂದರು.
ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ವಂಚಿತವಾಗಿರುವ ಹೆಬ್ಬಾಳವನ್ನು ಮತ್ತೆ ಅಭಿವೃದ್ಧಿಯ ಪಥಕ್ಕೆ ತರಲು ಬಿಜೆಪಿಗೆ ಮತ ನೀಡಿ, ತಮ್ಮ ತಂದೆ ಕಟ್ಟಾ ಸುಬ್ರಹ್ಮಣ್ಯನಾಯ್ಡು ಶಾಸಕರಾಗಿದ್ದಾಗ ಕ್ಷೇತ್ರದ ಅಭ್ಯುದಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ತಾವು ಕೂಡಾ ಅವರ ದಾರಿಯಲ್ಲೇ ಸಾಗಿ ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ಭರವಸೆಯನ್ನು ಕಟ್ಟಾ ಜಗದೀಶ್ ನೀಡಿದರು.
ಹಾಗೆಯೇ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಟ್ಟರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್‌ರವರು, ಗಂಗೇನಹಳ್ಳಿ, ಸಂಜಯನಗರ, ರಾಧಾಕೃಷ್ಣ ವಾರ್ಡ್, ನಾಗೇನಹಳ್ಳಿ ಸೇರಿದಂತೆ ಕ್ಷೇತ್ರದಾದ್ಯಂತ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು. ಪಕ್ಷದ ಹಲವಾರು ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.