ಹೆಬ್ಬಾಳ: ಕೋವಿಡ್ ಕೇರ್ ಸೆಂಟರ್ ಪ್ರಾರಂಭ

ಬೆಂಗಳೂರು, ಏ.೨೩-ತೀವ್ರಗತಿಯಲ್ಲಿ ಹರಡುತ್ತಿರುವ ಕೊರೋನಾ ಎರಡನೇ ಅಲೆಯಿಂದಾಗಿ ಹಾಸಿಗೆ ಕೊರತೆ ಉಂಟಾಗಿರುವ ಹಿನ್ನೆಲೆ ಇಲ್ಲಿನ ಹೆಬ್ಬಾಳ ವ್ಯಾಪ್ತಿಯಲ್ಲಿ ೬೦ ಬೆಡ್(ಹಾಸಿಗೆ) ಸಾಮಾರ್ಥ್ಯಯುಳ್ಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ.

ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವೆಟರ್ನರಿ ಕಾಲೇಜಿನಲ್ಲಿ ನೂತನ ಕೋವಿಡ್ ಕೇರ್ ಸೆಂಟರ್ ಯನ್ನು ಆರಂಭಿಸಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಬಿ.ಸುರೇಶ್, ದಿನೇ ದಿನೇ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ ತಂದಿದೆ. ಹಾಗಾಗಿ, ಪ್ರಾಥಮಿಕವಾಗಿ ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಸಿಗೆ ಸೌಲಭ್ಯ ಇರುವ ಕೋವಿಡ್ ಸೆಂಟರ್ ಆರಂಭಿಸಲಾಗಿದೆ ಎಂದರು.

ನಗರದ ಎಲ್ಲೆಡೆಯೂ ಆಕ್ಸಿಜನ್ ಕೊರತೆ ಇದೆ. ಹಾಗಾಗಿ, ಮೂವತ್ತು ಆಕ್ಸಿಜನ್ ಹಾಸಿಗೆಯೂ ಮೀಸಲಿಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಪತ್ರ ಮಾಡಲಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಕ್ರಮವಹಿಸಲಾಗುವುದು ಎಂದರು.

ಬಿಬಿಎಂಪಿ ವಿರೋಧಪಕ್ಷದ ಮಾಜಿ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ಕೋವಿಡ್ ಸೋಂಕಿನ ಸಮಸ್ಯೆ ಮತ್ತು ಸಾವಿನ ಪ್ರಮಾಣ ಏರಿಕೆ ಆಗಿರುವುದು ಭೀತಿ ಹುಟ್ಟಿಸಿದೆ.ಹಾಗಾಗಿ, ಜನರು ಸರ್ಕಾರದ ಮಾರ್ಗಸೂಚಿ ಪಾಲಿಸುವ ಜೊತೆಗೆ ಜಾಗೃತಿವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯರಾದ ಆನಂದ್ ಕುಮಾರ್, ಆನಂದ್,ಆರೋಗ್ಯಾಧಿಕಾರಿ ವೇದಾವತಿ ಸೇರಿದಂತೆ ಪ್ರಮುಖರಿದ್ದರು.