ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕಟೀಲ್‌ ಮನವಿ

ಮಂಗಳೂರು, ಮಾ.2೪- ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳ ಸದಸ್ಯ ಆರ್.ಕೆ. ಪಾಂಡೆ ಅವರನ್ನು ನವದೆಹಲಿಯ ಕಚೇರಿಯಲ್ಲಿ ಭೇಟಿಯಾಗಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ಭಾರತ್ ಮಾಲಾ ಯೋಜನೆಯಡಿ ಈಗಾಗಲೇ ಮಂಜೂರಾದ ಮುಲ್ಕಿ- ಕಿನ್ನಿಗೋಳಿ – ಮೂರುಕಾವೇರಿ- ಕಟೀಲು- ಪೊಳಲಿ- ಬಿ.ಸಿ.ರೋಡ್- ಮೆಲ್ಕಾರ್- ತೊಕ್ಕೊಟ್ಟು ರಸ್ತೆಯ ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಎನ್‌ಎಚ್‌ಎಐ (ಯೋಜನೆಗಳು) ಸದಸ್ಯ ಆರ್.ಕೆ. ಪಾಂಡೆ ಈ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ರಾ.ಹೆ. 169ರಲ್ಲಿ ಸಾಣೂರಿನಿಂದ ಬಿಕರ್ನಕಟ್ಟೆವರೆಗಿನ ಚತುಷ್ಪಥ ಕಾಮಗಾರಿಗೆ ಅಡ್ಡಿಯಾಗಿರುವ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿ ಅತೀ ಶೀಘ್ರದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸುವ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಾ.ಹೆ. 75ರಲ್ಲಿ ಶಿರಾಡಿ ಘಾಟ್ ಸುರಂಗ ಮಾರ್ಗದ ಕಾಮಗಾರಿಗೆ ಡಿಪಿಆರ್ ಮಾಡಲು ಸೂಕ್ರ ಕ್ರಮ ಕೈಗೊಳ್ಳಲಾಗುವುದು. ರಾ.ಹೆ. 275ರಲ್ಲಿ ಮಾಣಿಯಿಂದ ಕುಶಾಲನಗರವರೆಗಿನ 126 ಕಿ.ಮೀ. ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ಕಾರ್ಯವು ಪ್ರಗತಿಯದೆ. ರಾ.ಹೆ.75ರಲ್ಲಿ ಬಿ.ಸಿ.ರೋಡ್‌ನಿಂದ ಪೆರಿಯ ಶಾಂತಿವರೆಗಿನ ಚತುಷ್ಪಥ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆ.ಎನ್.ಆರ್. ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.