ಹೆದ್ದಾರಿ ಕಾಮಗಾರಿ ಅಪೂರ್ಣ: ಅತಿವೃಷ್ಟಿಯಿಂದ ಇದ್ದ ರಸ್ತೆಯೂ ಹಾಳಾಗಿದೆ

ಬೀದರ:ನ.2: ಜಿಲ್ಲೆಯನ್ನು ಸೀಳಿಕೊಂಡು ಹೋಗಿರುವ ಹೈದರಾಬಾದ್‌-ಸೋಲಾಪುರ ರಸ್ತೆಯನ್ನು ಬಿಟ್ಟರೆ ಜಿಲ್ಲೆಯಲ್ಲಿ ಒಂದು ಹೆದ್ದಾರಿಯೂ ಚೆನ್ನಾಗಿಲ್ಲ. ಕೆಲ ಕಡೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಅಪೂರ್ಣವಾಗಿದ್ದರೆ, ಮತ್ತೆ ಕೆಲಕಡೆ ಅತಿವೃಷ್ಟಿಯಿಂದಾಗಿ ಇದ್ದ ರಸ್ತೆಗಳೂ ಸಂಪೂರ್ಣ ಹಾಳಾಗಿವೆ. ಇದರಿಂದಾಗಿ ಜಿಲ್ಲೆಯ ಜನ ಅಷ್ಟೇ ಅಲ್ಲ; ಅಂತರರಾಜ್ಯ ಪ್ರಯಾಣಿಕರೂ ತೊಂದರೆ ಅನುಭವಿಸುತ್ತಿದ್ದಾರೆ.

ಜನಹಿತವನ್ನು ಗಮನದಲ್ಲಿಟ್ಟುಕೊಂಡು ಸಾಮೂಹಿಕ ಪ್ರಯತ್ನ ನಡೆಸಿ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಬೇಕಾದ ಜನಪ್ರತಿನಿಧಿಗಳು ಸ್ವ‍ಪ್ರತಿಷ್ಠೆಗಾಗಿ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ರಾಜಕಾರಣಿಗಳ ಗುದ್ದಾಟದಲ್ಲಿ ಸಾರ್ವಜನಿಕರು ನಿತ್ಯ ಸಂಕಟ ಎದುರಿಸುತ್ತಿದ್ದಾರೆ.

ಬೀದರ್-ಔರಾದ್ ಮಧ್ಯದ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 161ಎ)ಯನ್ನು ದುರಸ್ತಿ ಮಾಡುವಂತೆ ಜಿಲ್ಲೆಯ ಜನ ಐದು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಲ್ಲೇ ಇದ್ದಾರೆ.
ಆದರೆ, ಯಾರೊಬ್ಬರೂ ಗಂಭೀರವಾಗಿಲ್ಲ. ಹೆದ್ದಾರಿ ಸುಧಾರಣೆ ಜನರ ಪಾಲಿಗೆ ಕನಸಾಗಿದೆ.

ಮಾಂಜ್ರಾ ನದಿಗೆ ನಿರ್ಮಿಸಿದ ಸೇತುವೆಯನ್ನು ಅದೆಷ್ಟು ಬಾರಿ ದುರಸ್ತಿ ಮಾಡಿದ್ದಾರೋ ಲೆಕ್ಕವಿಲ್ಲ. ಅಧಿಕಾರಿಗಳು ಖರ್ಚು ಮಾಡಿರುವ ಮೊತ್ತವನ್ನು ನೋಡಿದರೆ ಎರಡು ಹೊಸ ಸೇತುವೆಗಳನ್ನು ನಿರ್ಮಿಸಬಹುದಿತ್ತು. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡದಿರುವುದು ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ. ಅಷ್ಟೇ ಅಲ್ಲ, ಜನರ ತೆರಿಗೆ ಹಣವೂ ರಸ್ತೆ ಅಭಿವೃದ್ಧಿ ಹೆಸರಲ್ಲಿ ಪೋಲಾಗುತ್ತಿದೆ.

ಕಳಪೆ ಕಾಮಗಾರಿ ಹಾಗೂ ಸೇತುವೆಯ ಎರಡೂ ಬದಿ ಭೂಕುಸಿತ ಆಗಿ ಈ ರಸ್ತೆ ಮೇಲಿನ ಸಂಚಾರ ನಿರ್ಬಂಧಿಸಲಾಗಿದೆ. ಒಂದೂವರೆ ವರ್ಷದಲ್ಲಿ ಎರಡನೇ ಬಾರಿ ಸಂಚಾರ ನಿರ್ಬಂಧಿಸಲಾಗಿದೆ. ಔರಾದ್‌ ಹಾಗೂ ಬೀದರ್ ತಾಲ್ಲೂಕಿನ ಜನ ಕೌಠಾ ಸೇತುವೆ ಬದಲು ಕಂದಗೂಳ ಸೇತುವೆ ಮಾರ್ಗವಾಗಿ ಸಂಚರಿಸಬೇಕಾಗಿದೆ. ಸಂಚಾರ ನಿರ್ಬಂಧದಿಂದಾಗಿ ವ್ಯಾಪಾರ ವಹಿವಾಟಿನ ಮೇಲೂ ದುಷ್ಪರಿಣಾಮ ಬೀರಿದೆ.

ಬೀದರ್‌-ಔರಾದ್‌ ಹೆದ್ದಾರಿ ಮೇಲ್ದರ್ಜೆಗೇರಿಸಲು ₹135 ಕೋಟಿ ಮಂಜೂರಾಗಿದೆ. ಹೆದ್ದಾರಿ ಪ್ರಾಧಿಕಾರ ಕಾಮಗಾರಿಯ ಟೆಂಡರ್‌ ಸಹ ಕರೆದಿದೆ. ಆದರೆ, ಹೈದರಾಬಾದ್‌ನ ಕಂಪನಿಯೊಂದು ಹೈಕೋರ್ಟ್‌ ಮೊರೆ ಹೋಗಿರುವ ಕಾರಣ ಹೈಕೋರ್ಟ್‌ ಟೆಂಡರ್‌ಗೆ ತಡೆಯಾಜ್ಞೆ ನೀಡಿದೆ ಎಂದು ಅಧಿಕಾರಿಗಳು ಮೇಲಿಂದ ಮೇಲೆ ಹೇಳುತ್ತಲೇ ಇದ್ದಾರೆ.