ಹೆದ್ದಾರಿ ಕಚೇರಿ ಮಂಜೂರು ಸಚಿವರಿಗೆ ಸಂಸದ ನಾಯಕ್ ಧನ್ಯವಾದ

ರಾಯಚೂರು,ಜೂ.೫-ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯನ್ನು ರಾಯಚೂರಿಗೆ ಮಂಜೂರು ಮಾಡಿದ್ದಕ್ಕಾಗಿ ಸಂಸದ ರಾಜ ಅಮರೇಶ್ವರ್ ನಾಯಕ್ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ರಾಯಚೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿ ಆರಂಭಿಸಲು ಸಂಸದ ರಾಜ ಅಮರೇಶ್ವರ್ ನಾಯಕ್ ನಿರಂತರ ಪ್ರಯತ್ನ ನಡೆಸಿದ್ದರು. ಪ್ರಯತ್ನದ ಫಲವಾಗಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ರಾಯಚೂರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಮಂಜೂರು ಮಾಡಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಯಚೂರು ಲೋಕಸಭಾ ವ್ಯಾಪ್ತಿಯ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸಾವಿರಾರು ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಈ ಕಾಮಗಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ಬಳ್ಳಾರಿ ಬಳಿಯ ಹೊಸಪೇಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ ದೂರದ ಹೊಸಪೇಟೆ ಹಾಗೂ ವಿಜಯಪುರ ಕಚೇರಿಗಳಿಂದ ರಾಯಚೂರು ಹಾಗೂ ಯಾದಗಿರಿ ವ್ಯಾಪ್ತಿಯ ಹೆದ್ದಾರಿ ಕಾಮಗಾರಿಗಳನ್ನು ಸಮರ್ಥವಾಗಿ ಹಾಗೂ ಗುಣಮಟ್ಟದಿಂದ ನಿರ್ವಹಿಸಲು ಸ್ಥಳೀಯ ಪ್ರಾದೇಶಿಕ ಕಚೇರಿಗಳ ಅಗತ್ಯತೆಯನ್ನು ಕಂಡು ಕೊಂಡಿದ್ದ ಸಂಸದ ರಾಜ ಅರಮೇಶ್ವರ್ ನಾಯಕ್ ಈ ಕುರಿತು ಕೇಂದ್ರ ಸಚಿವರನ್ನು ದೆಹಲಿಯಲ್ಲಿ ಭೇಟಿ ಮಾಡಿ ರಾಯಚೂರಿನಲ್ಲಿ ಪ್ರಾದೇಶಿಕ ಕಚೇರಿಯ ಆರಂಭಕ್ಕೆ ಮನವಿ ಮಾಡಿದ್ದರು. ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಚಿವ ಗಡ್ಕರಿಯವರು ರಾಯಚೂರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯನ್ನು ಮಂಜೂರು ಮಾಡಿದ್ದಾರೆ.
ಪ್ರಸ್ತುತ ಬೆಳಗಾವಿ, ಹುನಗುಂದ, ಹಾಸನ-ರಾಯಚೂರು ಭಾರತ್ ಮಾಲಾ ಪರಿಯೋಜನೆಯಡಿ ರಾಯಚೂರು-ಗದ್ವಲ್ ೬ ಪಥಗಳ ಗ್ರೀನ್ ಫೀಲ್ಡ್ ಹೆದ್ದಾರಿ ಕಾಮಗಾರಿ, ಯಾದಗಿರಿ ಜಿಲ್ಲೆಯಲ್ಲಿ ಮರಡಗಿ-ಅಂಕೋಲಾ-ಬಸವಂತಪುರ ಕಾಮಗಾರಿ ಸೇರಿದಂತೆ ಒಟ್ಟು ೮ ಯೋಜನೆಗಳು ಮಂಜೂರಾಗಿ ಅನುಷ್ಠಾನಗೊಳ್ಳುತ್ತಿರುವ ಕುರಿತು ಮಾಹಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸದ ಅಮರೇಶ್ವರ್ ನಾಯಕ್ ಹೆದ್ದಾರಿ ಪ್ರಾದೇಶಿಕ ಕಚೇರಿ ಮಂಜೂರಿಗೆ ಒತ್ತು ನೀಡಿದ್ದರು.