ಹೆದ್ದಾರಿಯಲ್ಲಿ ಉರುಳಿಬಿದ್ದ ಗೂಡ್ಸ್ ಲಾರಿ

ದೇವದುರ್ಗ.ನ.೨೪-ತಾಲೂಕಿನ ಚಿಕ್ಕಹೊನ್ನಕುಣಿ ಕ್ರಾಸ್ ಸಮೀಪ ವಾಹನಗಳನ್ನು ಸಾಗಿಸುತ್ತಿದ್ದ ಗೂಡ್ಸ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ.
ಮಹಾರಾಷ್ಟ್ರದ ಮೂಲಕ ಗೂಡ್ಸ್ ಲಾರಿ ವಾಹನ ಅನ್‌ಲೋಡ್ ಮಾಡಿಕೊಂಡು ರಾಯಚೂರಿಗೆ ತೆರಳುತ್ತಿದ್ದಾಗ ಮಂಗಳವಾರ ಸಂಜೆ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿಬಿದ್ದಿದೆ. ಬುಧವಾರ ಬೆಳಗ್ಗೆ ಕ್ರೇನ್‌ನಿಂದ ಗೂಡ್ಸ್ ಲಾರಿ ತೆರವು ವೇಳೆ ಸಂಚಾರ ದಟ್ಟಣೆ ಉಂಟಾಯಿತು.
ರಸ್ತೆಗೆ ಅಡ್ಡಲಾಗಿ ಕ್ರೇನ್ ನಿಲ್ಲಿಸಿ ಗೂಡ್ಸ್ ವಾಹನ ತೆಗೆಯಲಾಯಿತು. ಇದರಿಂದ ರಾಯಚೂರು-ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿ ಅರ್ಧಗಂಟೆಗೂ ಹೆಚ್ಚುಕಾಲ ಸಂಚಾರ ದಟ್ಟಣೆ ಉಂಟಾಯಿತು. ಎರಡೂ ಕಡೆ ಹಲವು ವಾಹನಗಳು ಸಾಲುಗಟ್ಟಿ ನಿಂತಿದ್ದವು. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.