ಹೆದ್ದಾರಿಗೆ ನ್ಯಾ.ಶಿವರಾಜ ಪಾಟೀಲ್ ಹೆಸರಿಡಿ

ದೇವದುರ್ಗ,ಜ.೧೦- ಪಟ್ಟಣದ ಜಹೀರುದ್ದೀನ್ ಪಾಷಾ ವೃತ್ತದಿಂದ ಶ್ರೀನಿವಾಸ್ ಕಾಲೋನಿವರಗೆ ರಾಜ್ಯ ಹೆದ್ದಾರಗೆ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ರಸ್ತೆ ಎಂದು ನಾಮಕರಣ ಮಾಡಬೇಕು ಎಂದು ಹಿರಿಯ ವಕೀಲ ಹಾಗೂ ಶ್ರೀಲಕ್ಷ್ಮಿ ವೆಂಕಟೇಶ್ವರ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ವಿ.ಎಂ.ಮೇಟಿ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಂಗಳವಾರ ಮಾತನಾಡಿದರು. ನ್ಯಾ.ಶಿವರಾಜ ವಿ.ಪಾಟೀಲ್ ದೇವದುರ್ಗ ತಾಲೂಕಿನ ಮಂದಕಲ್ ಗ್ರಾಮದವರಾಗಿದ್ದು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದು, ದೇವದುರ್ಗ ತಾಲೂಕಿನಿಂದ ಉನ್ನತ ಹುದ್ದೆಗೇರಿದ ಏಕೈಕ ವ್ಯಕ್ತಿ ನ್ಯಾ.ಶಿವರಾಜ ಪಾಟೀಲ್ ಆಗಿದ್ದಾರೆ. ಹೀಗಾಗಿ ಅವರಿಗೆ ಗೌರವ ಸಲ್ಲಿಸಲು ರಾಜ್ಯ ಹೆದ್ದಾರಿಗೆ ಅವರ ಹೆಸರು ನಾಮಕರಣ ಮಾಡಬೇಕಿದೆ.
ರಾಷ್ಟ್ರದ ಅತ್ಯುನ್ನತ ಗೌರವ ಸ್ಥಾನಕ್ಕೆ ಹೋಗಿರುವ ಅವರ ಹೆಸರು ಸದಾಕಾಲ ನೆನಪಿನಲ್ಲಿ ಉಳಿಯಲು ಹಾಗೂ ಮುಂದಿನ ಪೀಳಿಗೆ ಅವರ ಹೆಸರು ನೆನಪಿಸಲು ಈ ಕಾರ್ಯ ಮಾಡಬೇಕಿದೆ. ಈ ಬಗ್ಗೆ ಸ್ಥಳೀಯ ಪುರಸಭೆ ಹಾಗೂ ಶಾಸಕರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದರು. ರಾಜ್ಯ ಹೆದ್ದಾರಿಗೆ ನ್ಯಾ.ಶಿವರಾಜ ಪಾಟೀಲ್ ಹೆಸರಿಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ವಿಶ್ರಾಂತ ನ್ಯಾ.ಶಿವರಾಜ ಪಾಟೀಲ್ ಅವರ ಜನ್ಮದಿನ ನಿಮಿತ್ತ ಶಂಕರಬಂಡಿ ಕ್ರಾಸ್ ಹತ್ತಿರ ಅವರ ಹೆಸರಿನಲ್ಲಿ ಕಮಾನ್ ನಿರ್ಮಾಣ ಮಾಡಲಾಗುವುದು. ಜ.೧೨ರಂದು ಈ ಕಾಮಗಾರಿಗೆ ಭೂಮಪೂಜೆ ನೆರವೇರಿಸಲಾಗುವುದು. ಬೆಳಗ್ಗೆ ೧೦ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಗಣ್ಯರು, ವಕೀಲರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ ಚವ್ಹಾಣ್, ಮೌನೇಶ, ಬಸವರಾಜ ಗೌರಂಪೇಟೆ, ವೇಣುಗೋಪಾಲ್, ರವಿಕುಮಾರ ಪಾಟೀಲ್ ಅಳ್ಳುಂಡಿ ಇತರರಿದ್ದರು.