ಹೆದ್ದಾರಿಗೆ ಜಮೀನು ಸೂಕ್ತ ಬೆಲೆಗೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು,ಡಿ.೨೦-
ಮಾರುಕಟ್ಟೆ ಬೆಲೆ ನೀಡಿದರೆ ಮಾತ್ರ ರಾಷ್ಟ್ರೀಯ ಹೆದ್ದಾರಿಗೆ ಜಮೀನು ನೀಡುತ್ತೇವೆ ಇಲ್ಲದಿದ್ದರೆ ಯಾವ ಒತ್ತಡಕ್ಕೂ ಮಣಿಯುವುದಿಲ್ಲ, ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ರೈತರು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ೭೪೮ ಎಗಾಗಿ ಭೂಸ್ವಾದೀನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಆದರೆ ಜಮೀನಿಗೆ ಸೂಕ್ತ ಬೆಲೆ ನಿಗದಿಪಡಿಸದಿರುವುದು ಪ್ರಾಧಿಕಾರದ ಸರ್ವಾಧಿಕಾರಿ ಧೋರಣೆಯನ್ನು ಆರೋಪಿಸಿದ ರೈತರು ತೆರೆಬಾವಿ, ಬುದ್ದಿನ್ನಿ, ಅಮರಾವತಿ ವ್ಯಾಪ್ತಿಯ ಜಮೀನುಗಳು ನಂದವಾಡಿಗೆ ಏತ ನೀರಾವರಿಗೆ ಒಳಪಡಿತ್ತಿರುವುದರಿಂದ ಆ ಜಮೀನುಗಳಿಗೆ ನೀರಾವರಿ ಬೆಲೆ ನಿಗದಿಪಡಿಸಬೇಕು. ಸಣ್ಣ ರೈತರು ಜಮೀನು ಕಳೆದುಕೊಳ್ಳುತ್ತಿರುವುದರಿಂದ ಪರ್ಯಾಯ ಭೂಮಿ ಅಥವಾ ಸೂಕ್ತ ಬೆಲೆ ನೀಡಬೇಕು ಎಂದು ಒತ್ತಾಯಿದ್ದಾರೆ.
ಜನಸಾಮನ್ಯರಿಗೆ ಅವಶ್ಯಕತೆ ಇಲ್ಲದ ಹೆದ್ದಾರಿ ನಿರ್ಮಾಣ ಹಿಂಪಡೆಯಬೇಕು, ರಸ್ತೆಗಾಗಿ ಸ್ವಾಧೀನ ಮಾಡಿಕೊಳ್ಳುವ ಜಮೀನಿಗೆ ಪರ್ಯಾಯ ಜಮೀನು ನೀಡಬೇಕು, ಜಮೀನಿಗೆ ಮಾರುಕಟ್ಟೆ ದರ ಆಧರಿಸಿ ಪರಿಹಾರ ನೀಡಬೇಕು ಜಮೀನಲ್ಲಿರುವ ಮರ, ಬೋರ್‌ವೆಲ್, ವಡ್ಡು, ಪರಿಗಣಿಸಿ ಪ್ರತ್ಯೇಕ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಬಹುತ್ತೇಕ ಜಮೀನುಗಳ ಪೋಡಿ ವ್ಯವಸ್ಥೆಯಲ್ಲಿ ಸಾಕಷ್ಟು ಅಡಚಣೆ ಇದೆ ಒಂದೇ ಸರ್ವೇ ನಂಬರ್‌ನಲ್ಲಿ ಕುಟುಂಬದ ಅನೇಕ ಭಾಗಗಳಿವೆ ಹೆದ್ದಾರಿಗಾಗಿ ಕೆಲವರು ತಮ್ಮ ಭೂಮಿ ಹೆಚ್ಚು ಭಾಗವನ್ನು ಕಳೆದುಕೊಳ್ಳಲಿದ್ದಾರೆ. ಈ ರಾಷ್ಟ್ರೀಯ ಹೆದ್ದಾರಿ ಯೋಜನೆ ಅವೈಜ್ಞಾನಿಕವಾಗಿರುವುದರಿಂದ ರೈತರು ಹೆಚ್ಚು ಭೂಮಿ ಕಳೆದುಕೊಳ್ಳುವ ಅಪಾಯವಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಸೂಕ್ತ ಬೆಲೆ ನೀಡಿದರೆ ಮಾತ್ರ ರಾಷ್ಟ್ರೀಯ ಹೆದ್ದಾರಿಗೆ ಜಮೀನು ಬಿಟ್ಟುಕೊಡುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಶರಣಪ್ಪ ಉದ್ಬಾಳ್, ಮಲ್ಲನಗೌಡ, ಸಿದ್ದಲಿಂಗಪ್ಪ ಸಾಹುಕಾರ, ಬಸವರಾಜ ವಟಗಲ್, ಶರಣಗೌಡ ಬಸಾಪುರ, ಬಸವರಾಜ ಹೀರೆಮಠ, ಪಂಪಾಪತಿ ಹೊಸಗೌಡ್ರ, ಲಿಂಗಪ್ಪ ಮಟ್ಟೂರು, ಅಮರೇಶ ಸಂತೆ ಕಲ್ಲೂರು, ಶಿವರಾಜ ರಮೇಶ, ಕಡದರಾಳ,ಹನುಮ ರೆಡೆಪ್ಪ ನಾಯಕ ಇತರರು ಇದ್ದರು.