ಹೆದರುವುದಿಲ್ಲ – ಕಾನೂನು ಹೋರಾಟ

ರಾಯಚೂರು.ಅ.30- ನಗರಸಭೆ ಸದಸ್ಯತ್ವ ರದ್ದುಗೊಳಿಸುವ ಶಾಸಕ ಡಾ.ಶಿವರಾಜ ಪಾಟೀಲ್ ಎಚ್ಚರಿಕೆಯೂ ನಂತರವೂ ಕಾಂಗ್ರೆಸ್ ಪಕ್ಷವನ್ನು ಬಿಡಲು ಒಪ್ಪದೇ, ಸದಸ್ಯತ್ವ ಕಳೆದುಕೊಂಡಿರುವ ರೇಣುಕಮ್ಮ ಭೀಮರಾಯ ಅವರ ಪಕ್ಷ ನಿಷ್ಠೆ ಈಗ ಭಾರೀ ಚರ್ಚೆಗೆ ದಾರಿ ಮಾಡಿದೆ.
ಕಳೆದ ಎರಡು ವರ್ಷದಿಂದ ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದು, ಕೊನೆಗೂ ನಗರಸಭೆ ಚುನಾವಣೆ ಸಂದರ್ಭದಲ್ಲಿಯೇ ರೇಣುಕಮ್ಮ ಭೀಮರಾಯ ಅವರ ಸದಸ್ಯತ್ವ ರದ್ದು ಬಿಜೆಪಿ ರಾಜಕೀಯ ಒತ್ತಾಸೆಗನುಗುಣವಾಗಿದೆಂದು ರೇಣುಕಮ್ಮ ಭೀಮರಾಯ ಅವರು ಆರೋಪಿಸಿದ್ದಾರೆ.
ನಿನ್ನೆ ಅವರ ಸದಸ್ಯತ್ವ ರದ್ದಾದ ನಂತರ ಅವರೊಂದಿಗೆ ಮಾತನಾಡಿದಾಗ ಕಳೆದ ಒಂದು ವರ್ಷದ ಹಿಂದೆ ಸ್ವತಃ ಶಾಸಕ ಡಾ.ಶಿವರಾಜ ಪಾಟೀಲ್ ಅವರು ತಮ್ಮೊಂದಿಗೆ ಮಾತನಾಡಿ, ಸದಸ್ಯತ್ವ ಉಳಿಸುತ್ತೇನೆ, ನಮ್ಮ ಪರವಾಗಿ ಮತ ಚಲಾಯಿಸಬೇಕೆಂದು ಕೇಳಿದ್ದರೆಂದು ಅವರು ಹೇಳಿದರು. ಆದಾದ ನಂತರ ಶಾಸಕರ ಬೆಂಬಲಿಗರು ಪದೇ ಪದೇ ನನಗೆ ಸಂಪರ್ಕಿಸಿ, ಬಿಜೆಪಿ ಪರ ಮತ ಚಲಾಯಿಸದಿದ್ದರೇ, ಸದಸ್ಯತ್ವ ರದ್ದು ನಿಶ್ಚಿತವೆಂದು ಎಚ್ಚರಿಸಿದರು. ಆದರೆ, ಯಾವುದೇ ಬೆದರಿಕೆಗೆ ಜಗ್ಗದೇ, ಕಾಂಗ್ರೆಸ್ಸಿನೊಂದಿಗೆ ಉಳಿಯುವ ಅಚಲ ನಿರ್ಧಾರ ಮಾಡಿದ್ದೇನೆ.
ಕಳೆದ ಎರಡು ದಿನಗಳಿಂದೆ 20 ಸದಸ್ಯರು, ಕಾಂಗ್ರೆಸ್, ಜಾದಳ ಮತ್ತು ಪಕ್ಷೇತರ 20 ಸದಸ್ಯರು ಸದಸ್ಯತ್ವ ಉಳಿವಿಗಾದರೇ ನೀವು ಬಿಜೆಪಿಯತ್ತ ಹೋಗುವುದಾದರೇ ನನಗೆ ಹೇಳಿದ್ದರು. ನಾನು ಈ ಹಂತದಲ್ಲಿ ಪಕ್ಷದಿಂದ ಹೊರ ಹೋಗಿ ಈ ಹಂತದಲ್ಲಿ ಕಾಂಗ್ರೆಸ್ಸಿನಿಂದ ಹೊರ ನಡೆಯುವುದನ್ನು ನನ್ನ ಮನಸಾಕ್ಷಿ ಅಂಗೀಕರಿಸದ ಕಾರಣ ಸದಸ್ಯತ್ವ ರದ್ದಾದರೂ ತೊಂದರೆಯಿಲ್ಲ. ನಾನು ಕಾಂಗ್ರೆಸ್ ಜೊತೆಗೆ ಉಳಿಯುವುದಾಗಿ ನಿರ್ಧರಿಸಿ, ಅವರೊಂದಿಗೆ ಗುರುತಿಸಿಕೊಂಡಿದ್ದೇನೆ. ಸದಸ್ಯತ್ವ ರದ್ದುಗೊಳಿಸುವ ಬೆದರಿಕೆಯಿಂದ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನ ಚುನಾವಣೆಯಲ್ಲಿ ನನಗೆ ಯಾರು ಗೆಲ್ಲಲು ಕಾರಣರಾಗಿದ್ದಾರೋ ಅವರೊಂದಿಗೆ ನಾನು ಗುರುತಿಸಿಕೊಂಡಿದ್ದೇನೆ. ಮುಂದೆಯೂ ಅವರೊಂದಿಗೆ ಇರುತ್ತೇನೆ.
ನಾನು ಸಿಳ್ಳೆಕ್ಯಾತ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಪಂಚನಾಮೆ ವರದಿಯಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಮುಂಬರುವ ದಿನಗಳಲ್ಲಿ ಕಾನೂನಿನ ಮೂಲಕ ಹೋರಾಟ ನಡೆಸಿ, ನಿಶ್ಚಿತವಾಗಿ ಜಯಗಳಿಸುತ್ತೇನೆಂಬ ವಿಶ್ವಾಸ ನನ್ನದು. ರಾಜಕೀಯ ಒತ್ತಡದಲ್ಲಿ ಅಧಿಕಾರಿಗಳು ಏನೇ ತೀರ್ಮಾನ ಕೈಗೊಂಡಿದ್ದರೂ, ನನಗೆ ನ್ಯಾಯಾಲಯದ ಮೇಲೆ ವಿಶ್ವಾಸವಿದೆ. ನಿನ್ನೆ ಹೈಕೋರ್ಟ್‌ನಲ್ಲಿ ಸದಸ್ಯತ್ವ ರದ್ದಿಗೆ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ. ಗುಲ್ಬರ್ಗಾ ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.
ಈ ಹಂತದಲ್ಲಿ ಸದಸ್ಯತ್ವ ರದ್ದುಗೊಳಿಸಿರುವುದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯೇ ಕಾರಣ ಎನ್ನುವುದು ಪ್ರತ್ಯೇಕಿಸಿ ಹೇಳುವ ಅಗತ್ಯವಿಲ್ಲ. ನಾನು ಯಾವುದೇ ಬೆದರಿಕೆಗಳಿಗೆ ಭಯ ಪಡದೇ, ಕಾನೂನು ಮೂಲಕ ಮತ್ತೇ ನಾನು ನಗರಸಭೆ ಸದಸ್ಯನಾಗಿ ಅರ್ಹತೆ ಪಡೆಯುತ್ತೇನೆಂಬ ವಿಶ್ವಾಸ ವ್ಯಕ್ತಪಡಿಸಿದರು.