ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ: ವಿಜಯಕುಮಾರ. ಜಿ ಎಮ್

????????????????????????????????????

ಕಲಬುರಗಿ:ಎ.2: ಮಕ್ಕಳೇ ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಇಲಾಖೆ ನಿಮ್ಮ ಸೇವೆಗೆ ನಿಂತಿದೆ. ಇಂತಹ ಅನೇಕ ಪರೀಕ್ಷೆಗಳನ್ನು ಬರೆದು ಉತ್ತಮ ಅಂಕ ಗಳಿಸಿ ಹತ್ತನೇ ತರಗತಿಗೆ ಬಂದಿದ್ದೀರಿ. ನಿಮ್ಮ ಪ್ರಯತ್ನಕ್ಕೆ ಖಂಡಿತ ಉತ್ತಮ ಯಶಸ್ಸು ಲಭಿಸುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರಾದ ವಿಜಯಕುಮಾರ. ಜಿ ಎಮ್ ಅಭಿಪ್ರಾಯ ಪಟ್ಟರು.

ನಗರದ ರಾಮ ಮಂದಿರ ಸಮೀಪದ ವಿವೇಕಾನಂದ ವಿದ್ಯಾ ನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ‘ಹತ್ತರ ಪರೀಕ್ಷೆ ಭಯ, ಹತ್ತಿರ ಬೇಡ’ ಶೀರ್ಷಿಕೆಯಡಿ ಪರೀಕ್ಷಾ ತಯಾರಿ ಕುರಿತ ಉಪನ್ಯಾಸ ಮಾಲಿಕೆಯನ್ನು ಆಯೋಜಿಸಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರಾದ ವಿಜಯಕುಮಾರ. ಜಿ ಎಮ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಾಠಗಳನ್ನು ಅರ್ಥವಾಗುವವರೆಗೆ ಓದಬೇಕು. ಬಳಿಕ ಕಣ್ಣು ಮುಚ್ಚಿ ಓದಿದ ವಿಷಯವನ್ನು ಸ್ಮರಿಸಿಕೊಳ್ಳಬೇಕು. ನಂತರ ಅದನ್ನು ಬರೆದು ಯಾವುದಾದರೂ ಅಂಶ ಮರೆತು ಹೋಗಿದೆಯೇ ಎಂದು ನೋಡಿಕೊಳ್ಳಬೇಕು. ಮನೆಯಲ್ಲಿ ವಿಶ್ರಾಂತಿ ಪಡೆಯುವಾಗ, ಊಟ ಮಾಡುವಾಗ, ಮಲಗುವ ಮುನ್ನ ಹೀಗೆ ಅವಕಾಶ ಸಿಕ್ಕಾಗ ಗ್ರಹಿಸಿದ ವಿಷಯವನ್ನು ಮೆಲಕು ಹಾಕಬೇಕು ಎಂದು ಕಿವಿ ಮಾತು ಹೇಳಿದರು.

ಕಲಬುರಗಿ ದಕ್ಷಿಣ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಓದುವುದರ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಪರೀಕ್ಷಾ ಮಂಡಳಿ ನೀಡಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು. ನಿಮ್ಮ ಉತ್ತರ ಪತ್ರಿಕೆಯೊಂದಿಗೆ ಮಂಡಳಿಯ ಮಾದರಿ ಉತ್ತರಗಳನ್ನು ತಾಳೆ ಹಾಕಿ ನೋಡಬೇಕು. ಇನ್ನೂ ಉತ್ತಮವಾಗಿ ಹೇಗೆ ಬರೆಯಬಹುದೆಂದು ಶಿಕ್ಷಕರೊಡನೆ ಚರ್ಚಿಸಬೇಕೆಂದು ಸಲಹೆ ನೀಡಿದರು.

ಶಾಲೆಯ ಪ್ರಿನ್ಸಿಪಾಲ ಸಿದ್ದಪ್ಪ ಭಗವತಿ ಮಾತನಾಡಿ ಮಕ್ಕಳು ಪರೀಕ್ಷಾ ಸಿದ್ದತೆಯನ್ನು ಚೆನ್ನಾಗಿ ಮಾಡಿಕೊಂಡಿದ್ದು, ದಿನಾಲು ಬೆಳಿಗ್ಗೆ 9.30 ರಿಂದ ಸಾಯಂಕಾಲ 7.30 ರ ವರೆಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮಕ್ಕಳಿಗೆ ಬದಲಾದ ಪ್ರಶ್ನೆ ಪತ್ರಿಕೆಯ ಸ್ವರೂಪ ಹಾಗೂ ವಿನ್ಯಾಸದ ಬಗ್ಗೆ ತಿಳಿಸಲಾಗಿದೆ. ನೀಲ ನಕ್ಷೆಯ ಪ್ರಕಾರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಉತ್ತಮ ಫಲಿತಾಂಶ ನೀಡಲಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ SSLC ತಾಲೂಕ ನೂಡಲ್ ಅಧಿಕಾರಿ ಶಿವಮೂರ್ತೆಪ್ಪ, ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.