ಹೆತ್ತ ಮಗುವನ್ನೇ ಕೊಂದ ಪಾಪಿ ತಾಯಿ

ಬೆಂಗಳೂರು.ಏ.೭- ಯಾವುದೇ ವಿಷಯವಾದರೂ ತಂದೆ ಪರವಾಗಿ ಮಾತನಾಡುತ್ತಿದ್ದ ಮೂರು ವರ್ಷದ ಮಗಳನ್ನು ತಾಯಿಯೇ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಅಮಾನವೀಯ ಕೃತ್ಯ ಅನ್ನಪೂರ್ಣೇಶ್ವರಿ ನಗರದ ದೀಪಾ ಕಾಂಪ್ಲೆಕ್ಸ್ ಬಳಿ ನಡೆದಿದೆ.
ಮಲ್ಲತಹಳ್ಳಿಯ ವಿನುತಾ (೩) ಳನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿದ ತಾಯಿ ಸುಧಾಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಕೊಲೆಯಾದ ವಿನುತಾಳ ತಂದೆ ಈರಣ್ಣ ಸುಧಾಳೊಂದಿಗೆ ಮಲ್ಲತಹಳ್ಳಿಯಲ್ಲಿ ವಾಸಿಸುತ್ತಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಪತ್ನಿ ಸುಧಾ ಕೂಡ ಟೈಲ್ಸ್ ಅಂಗಡಿಯೊಂದರಲ್ಲಿ ಬೆಳಿಗ್ಗೆ ೯ ಗಂಟೆಗೆ ಕೆಲಸಕ್ಕೆ ಹೋಗಿ ಮಧ್ಯಾಹ್ನ ೧೨ಕ್ಕೆ ಹಿಂದಿರುಗುತ್ತಿದ್ದರು ಬೆಳಿಗ್ಗೆ ೯ ಗಂಟಗೆ ಕೆಲಸಕ್ಕೆ ಹೋಗುತ್ತಿದ್ದ ಈರಣ್ಣ ರಾತ್ರಿ ೮ಕ್ಕೆ ವಾಪಾಸ್ಸಾಗುತ್ತಿದ್ದು, ಮಧ್ಯೆ ಊಟ-ತಿಂಡಿಗೆ ಮನೆಗೆ ಬರುತ್ತಿದ್ದು, ಟಿವಿಯಲ್ಲಿ ಹೆಚ್ಚಾಗಿ ನ್ಯೂಸ್ ಚಾನಲ್‌ನ್ನು ವೀಕ್ಷಿಸುತ್ತಿದ್ದರು. ಇದಕ್ಕೆ ಪತ್ನಿ ಸುಧಾ ವಿರೋಧ ವ್ಯಕ್ತಪಡಿಸುತ್ತಿದ್ದಾಗ ಮಗು ವಿನುತಾ ತಂದೆ ಪರವಾಗಿ ನಿಲ್ಲುತ್ತಿದ್ದು ತಂದೆಗೆ ಬೇಕಾದ ಚಾನೆಲ್ ನೋಡಲು ಬಿಡುವಂತೆ ತಾಯಿ ಜತೆ ಗಲಾಟೆ ಮಾಡುತ್ತಿದ್ದಳು ಇದಲ್ಲದೆ ಮನೆಗೆ ಯರಾದರು ಬಂದು ಹೋದರೆ ಅದೆಲ್ಲವನ್ನು ತಂದೆಗೆ ಹೇಳುತ್ತಿದು, ತಾಯಿಯ ಯಾವುದೇ ವಿಷಯವನ್ನು ಮುಚ್ಚುಮರೆ ಮಾಡುತ್ತಿರಲಿಲ್ಲ. ಇದರಿಂದ ಆಕ್ರೋಶಗೊಂಡ ತಾಯಿ ಸುಧಾ ನಿನ್ನೆ ಸಂಜೆ ೬ರ ವೇಳೆ ಮಗು ವಿನುತಾಳನ್ನು ಗೋಬಿ ಮಂಚೂರಿ ಕೊಡಿಸುವುದಾಗಿ ಕರೆದೊಯ್ದು ಮಲ್ಲತಹಳ್ಳಿ ಅನ್ನಪೂರ್ಣೇಶ್ವರಿ ನಗರಗಳಲ್ಲಿ ಸುತ್ತಾಡಿ ರಾತ್ರಿ ೮ರ ವೇಳೆ ದೀಪಾ ಕಾಂಪ್ಲೆಕ್ಸ್ ಬಳಿಯ ನಿರ್ಮಾಣ ಹಂತದ ಕಟ್ಟಡ ಬಳಿ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ಮನೆಗೆ ಬಂದಿದ್ದು, ಕೆಲಸ ಮುಗಿಸಿಕೊಂಡು ಪತಿ ಈರಣ್ಣ ಬಂದಾಗ ಮಗಳು ಗೋಬಿ ಮಂಚೂರಿ ತಿನ್ನಲು ಕರೆದೊಯ್ದ ವೇಳೆ ಕಾಣೆಯಾಗಿರುವುದಾಗಿ ತಿಳಿಸಿದ್ದಾಳೆ. ಆತಂಕಗೊಂಡ ಈರಣ್ಣ ಸ್ನೇಹಿತನ ಜತೆ ಹುಡುಕಾಟ ನಡೆಸಿ ಕೊನೆಗೆ ಜ್ಞಾನಭಾರತಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೀಪಾಕಾಂಪ್ಲೆಕ್ಸ್ ಬಳಿ ಇಂದು ಬೆಳಿಗ್ಗೆ ವಾಯುವಿಹಾರಕ್ಕೆ ಹೋದವರು ಮಗುವಿನ ಮೃತ ದೇಹ ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪರಿಶೀಲನೆ ನಡೆಸಿ ಮೃತ ಮಗುವನ್ನು ನಿನ್ನೆ ರಾತ್ರಿ ಕಾಣೆಯಾಗಿದ್ದ ದೂರು ನೀಡಿದ್ದ ತಂದೆ-ತಾಯಿಯನ್ನು ಕರೆಸಿ ತೋರಿಸಿದಾಗ ತಮ್ಮದೇ ಮಗು ಎಂದು ಖಚಿತಪಡಿಸಿದ್ದಾರೆ. ಕೂಡಲೇ ಪ್ರಕರಣ ದಾಖಲಿಸಿ ಅನುಮಾನದ ಮೇಲೆ ತಾಯಿ ಸುಧಾಳನ್ನು ವಿಚಾರಿಸಿದಾಗ ಮಗುವನ್ನು ಗೋಬಿಮಂಚೂರಿ ತಿನ್ನಲು ಅಂಗಡಿ ಬಳಿ ಕರೆದುಕೊಂಡು ಹೋಗದೆ ಇರುವುದು ಸಿಸಿ ಟಿವಿ ಕ್ಯಾಮಾರದಲ್ಲಿ ಪತ್ತೆಯಾಗಿದೆ.
ತಾಯಿ ಸುಧಾಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮಗುವನ್ನು ತಾನೇ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾಳೆ. ಮಗಳು ನನ್ನನ್ನು ಮೆಂಟಲ್ ಎಂದು ಕರೆಯುತ್ತ ತಂದೆ ಪರ ಮಾತನಾಡುತ್ತಿದ್ದರಿಂದ ಈ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆಕೆಯನ್ನು ಬಂಧಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.