ಹೆತ್ತವರ ಶ್ರಮ ವ್ಯರ್ಥವಾಗಬಾರದು

ಮಧುಗಿರಿ, ಜು. ೨೮- ಹೆತ್ತವರ ಶ್ರಮ ವ್ಯರ್ಥವಾಗದಂತೆ ಮಕ್ಕಳು ಸಾಧನೆ ತೋರಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಅಶೋಕ್‌ಕುಮಾರ್ ಹೇಳಿದರು.
ತಾಲ್ಲೂಕಿನ ಮಿಡಿಗೇಶಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಮಾಜಮುಖಿ ಪ್ರತಿಷ್ಠಾನ ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಮಿಡಿಗೇಶಿ ಹೋಬಳಿಯ ಎಲ್ಲ ಸರ್ಕಾರಿ ಪ್ರೌಢಶಾಲೆಗಳ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂವಹನಾ ಕೌಶಲ್ಯ, ನಾಯಕತ್ವ, ಉನ್ನತ ಶಿಕ್ಷಣದ ಮಹತ್ವ ಮತ್ತು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ನಂತರದ ಲಭ್ಯವಿರುವ ಕೋರ್ಸ್‌ಗಳ ಹಾಗೂ ಉದ್ಯೋಗಾವಕಾಶಗಳು ಎಂಬ ವಿಷಯಗಳ ಬಗ್ಗೆ ಪ್ರೇರಣಾ ಉಪನ್ಯಾಸ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ತಂದೆ-ತಾಯಿಗಳು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿರುತ್ತಾರೆ. ಮಕ್ಕಳು ಉತ್ತಮ ಸಾಧನೆ ಮಾಡಿ ಅವರ ಆಸೆಗಳನ್ನು ಪೂರೈಸಬೇಕು. ವಿದ್ಯೆ ಕಲಿತರೆ ಪ್ರಪಂಚದ ಯಾವ ಮೂಲೆಗೆ ಹೋದರು ಗೌರವ ನೀಡುತ್ತಾರೆ. ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಅನೇಕ ಮಾರ್ಗಗಳಿದ್ದು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಆರ್.ಕೆ. ರಮೇಶ್‌ಬಾಬು ಮಾತನಾಡಿ, ಏಕಾಗ್ರತೆ, ಶ್ರದ್ದೆ ವಿನಯಗಳನ್ನು ಮೈಗೂಡಿಸಿಕೊಂಡು ಉನ್ನತ ವ್ಯಾಸಂಗ ಮಾಡಿ ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ೨೦೨೧-೨೨ ನೇ ಸಾಲಿನ ಪಿಯುಸಿ ಪರೀಕ್ಷೆಗಳಲ್ಲಿ ಹೋಬಳಿ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ತಲಾ ೩ ಸಾವಿರ ರೂ.ಗಳು ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ಕ್ರಮವಾಗಿ ೩, ೨ ಮತ್ತು ಒಂದು ಸಾವಿರ ರೂ.ಗಳ ನಗದು ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜಮುಖಿ ಪ್ರತಿಷ್ಟಾನದ ಅಧ್ಯಕ್ಷ ಕೆ.ವಿ.ನಾಗಪ್ಪ, ಪ್ರಾಂಶುಪಾಲರಾದ ಎಂ.ಕೆ.ಲತಾ, ಪ್ರೊ.ಕೆ.ಸಿ ಬಸವರಾಜು, ಪ್ರೊ.ಡಾ. ಕೆ.ರಂಗ, ಪದಾಧಿಕಾರಿಗಳಾದ ಕೃಷ್ಣಸ್ವಾಮಿ, ಕೆ.ಜಿ.ಸಿದ್ದಪ್ಪ, ಕೆ.ಆರ್.ಬಸವರಾಜು, ಆರ್.ನಾರಾಯಣ್, ಕೆ.ಎಂ.ಪುಟ್ಟಮಲ್ಲಯ್ಯ, ಕೆ.ಜಿ.ಮಲ್ಲೇಶಯ್ಯ, ಕೆ.ಜಿ.ನಾಗರಾಜು ಸೇರಿದಂತೆ ಸರ್ಕಾರಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.