ಹೆಣ್ಮಕ್ಕಳು ತಪ್ಪದೇ ಶಿಕ್ಷಣ ಪಡೆಯಿರಿ : ತಿಮ್ಮಾರೆಡ್ಡಿ

ಬಳ್ಳಾರಿ, ಜ.28: ನಗರದ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಡೆಯಿತು.ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ವೈ. ತಿಮ್ಮಾರೆಡ್ಡಿಯವರು ಮಾತನಾಡಿ ಸಮಾಜದ ಅಭಿವೃದ್ಧಿಯಲ್ಲಿ ಹೆಣ್ಣು ಮಕ್ಕಳ ಪಾತ್ರ ತುಂಬಾ ಮುಖ್ಯ. ಎಲ್ಲ ಹೆಣ್ಣು ಮಕ್ಕಳು ತಪ್ಪದೆ ಶಿಕ್ಷಣವನ್ನು ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದು ನಿಮ್ಮ ಜೀವನದಲ್ಲಿ ಏನಾದರು ಸಾಧಿಸಿ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಹೆಚ್.ಸಿ.ರಾಘವೇಂದ್ರ ಅವರು ಮಾತನಾಡಿ, ವರದಕ್ಷಿಣೆ, ಬಾಲ್ಯವಿವಾಹ, ಹೆಣ್ಣುಮಕ್ಕಳ ಮೇಲೆ ಆಗುವ ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾರ್ಯನಿರ್ವಹಿಸುತ್ತಿದೆ. ಇಂತಹ ಯಾವುದೇ ದೌರ್ಜನ್ಯಗಳು ನಡೆದದ್ದು ನಿಮ್ಮ ಗಮನಕ್ಕೆ ಬಂದ ಕೂಡಲೇ ರಕ್ಷಣಾ ಆಯೋಗಕ್ಕೆ ತಿಳಿಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಎಲ್ಲರು ಸಹಕರಿಸಿ ಎಂದರು.
ಎಲ್ಲ ಹೆಣ್ಣು ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡು ಹೋಗಿ ಎಂದು ತಿಳಿಸಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿಗಳಾದ ಮಾಂಟು ಪಾತರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಎ.ಮೌನೇಶ, ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥರಾದ ವಿಜೇಂದ್ರ ಕೆ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಶಿಕಿರಣ್ ಗುಡೇಕೋಟೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಂಯೋಜಕರಾದ ಸೋಮಶೇಖರ್ ಕಲ್ಡಳ್ಳಿ ಮೊದಲಾದವರು ಇದ್ದರು.