ಹೆಣ್ಣ ಭ್ರೂಣ ಹತ್ಯೆಕೋರರಿಗೆ ಕಠಿಣ ಶಿಕ್ಷೆಗೆ ಒತ್ತಾಯ

ಸಂಜೆವಾಣಿ ನ್ಯೂಸ್
ಮೈಸೂರು,ಡಿ.8:- ಲಿಂಗಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ದಂಧೆಕೋರರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹೆಣ್ಣು ಭ್ರೂಣ ಹತ್ಯೆಯ ಕರಾಳ ಮುಖ ರಾಜ್ಯದಲ್ಲೀಗ ಎಲ್ಲರಿಗೂ ಪರಿಚಯವಾಗಿದೆ. ಹೆಣ್ಣು ಭ್ರೂಣಗಳ ಹತ್ಯೆ ತಡೆಯಲು ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರಜ್ಞಾನ ಕಾಯ್ದೆ ಜಾರಿಗೆ ಬಂದಿದೆ. 2003ರಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲಿಂಗ ಆಯ್ಕೆ ನಿಷೇಧ ಎನ್ನುವ ಪದವನ್ನು ಕಾಯ್ದೆಗೆ ಸೇರಿಸಲಾಗಿದೆ. ಹೆಣ್ಣು ಭ್ರೂಣಗಳನ್ನು ಕೊಲ್ಲುವ ದಂಧೆ ಪತ್ತೆಹಚ್ಚಿ ಮಟ್ಟ ಹಾಕಲು ಸಕ್ಷಮ ಪ್ರಾಧಿಕಾರಿಗಳನ್ನು ತೆರೆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಕಿಡಿ ಕಾರಿದರು.
ಹೆಣ್ಣಿನ ಕುರಿತಾದ ಹಗುರವಾದ ನಿಲುವುಗಳು ಈ ದಂಧೆಗೆ ಪರೋಕ್ಷ ಕಾರಣವಾಗಿವೆ. ಗದ್ದೆ, ಹೊಲ, ಆಲೆಮನೆಗಳಲ್ಲಿ ಸೋನೋಗ್ರಫಿ ಅವ್ಯಾಹತವಾಗಿ ನಡೆದಿದೆ. ಸ್ತ್ರೀ ಭ್ರೂಣ ಹತ್ಯೆ ನಮ್ಮ ರಾಜ್ಯ ಉತ್ತರ ರಾಜ್ಯಗಳ ದಿವಾಳಿ ಸಾಂಸ್ಕೃತಿಕ ಆಲೋಚನೆ ಕಡೆಗೆ ಹೆಜ್ಜೆ ಹಾಕುತ್ತಿರುವ ಲಕ್ಷಣವಾಗಿದೆ. ಮೈಸೂರಿನಲ್ಲೂ ಭ್ರೂಣ ಹತ್ಯೆ ಎಗ್ಗಿಲ್ಲದೆ ನಡೆಯುತ್ತಿರುವುದು, ವೈದ್ಯರು, ದಾದಿಯರು, ಲ್ಯಾಬ್ ಟೆಕ್ನೀಷಿಯನ್‍ಗಳು ಭಾಗವಹಿಸಿರುವುದರಿಂದ ಮೈಸೂರಿನ ಜನತೆ ತಲೆ ತಗ್ಗಿಸುವಂತಾಗಿದೆ. ಈ ಅಕ್ರಮ ತಡೆಯಲು ಸರ್ಕಾರ ಸೂಕ್ತ ಕಾನೂನು ರೂಪಿಸಬೇಕು. ಸಮಾಜ ಘಾತುಕ ಶಕ್ತಿಗಳನ್ನು ಕಠಿಣ ಶಿಕ್ಷಗೆ ಗುರಿಪಡಿಸಬೇಕು. ಜಿಲ್ಲಾ ಸಕ್ಷಮ ಪ್ರಾಧಿಕಾರಿಗಳನ್ನು ಹೊಸದಾಗಿ ರಚಿಸಿ ನಿಗಾ ವ್ಯವಸ್ಥೆ ಬಲಪಡಿಸಬೇಕು. ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆಯ ಸಾಮಾಜಿಕ ನ್ಯಾಯ ಸಮಿತಿ, ಆರೋಗ್ಯ ಇಲಾಖೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಜಿಲ್ಲಾಡಳಿತ, ಪೆÇಲೀಸ್ ಇಲಾಖೆ, ಕಾನೂನು ಪ್ರಾಧಿಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಸಹ ಕಾರ್ಯದರ್ಶಿ ಸುಶೀಲ, ಜಿಲ್ಲಾ ಸಂಚಾಲಕಿ ಕೆ.ಸಿ.ಆಶಾ, ರಂಜಿತ.ಪಿ.ಆರ್, ಸುನೈನಾ, ಲೀಲಾವತಿ, ಪುಷ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.