ಹೆಣ್ಣೆಂದರೆ ಧೈರ್ಯ ಸಾಹಸಗಳ ಪ್ರತೀಕ:  ಸೋಮಶೇಖರ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ,ಮಾ.9: ಹೆಣ್ಣೆಂದರೆ ಸಹನೆ, ಹೆಣ್ಣೆಂದರೆ ಸಮಾಧಾನ, ಹೆಣ್ಣೆಂದರೆ ನ್ಯಾಯ-ನೀತಿ, ತ್ಯಾಗ-ಬಲಿದಾನ, ಧೈರ್ಯ-ಸಾಹಸಗಳ ಪ್ರತೀಕ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ  ಹೇಳಿದರು.
 ನಗರದ ವಾಲ್ಮೀಕಿ ಭವನ ಸಭಾಂಗಣದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿಗೆ ಅನ್ನ ನೀಡೋ ಭೂಮಿಗೆ “ಭೂತಾಯಿ” ಎನ್ನುತ್ತೇವೆ. ನಮ್ಮ ಸಮಾಜದಲ್ಲಿ ಅತ್ಯುನ್ನತ ಸ್ಥಾನ ಯಾರಿಗಾದರೂ ಇದೆ ಎಂದರೆ ಅದು ಹೆಣ್ಣಿಗೆ ಮಾತ್ರ. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪೂ ಮೂಡಿಸಿದ್ದಾಳೆ. ಮಹಿಳೆಯರ ಸುರಕ್ಷತೆ ಮತ್ತು ಆರ್ಥಿಕತೆ ಹಾಗೂ ಅವರ ಸಬಲೀಕರಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಅದ್ಯತೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಸರ್ಕಾರವು ಕೃಷಿ ಚಟುವಟಕೆಗಳಲ್ಲಿ ತೊಡಗಿದ ಮಹಿಳೆಯರಿಗೆ ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿ ಆರಂಭಿಸಲಾಗಿದೆ. ಮಹಿಳಾ ಶಕ್ತಿ ಸಾವಿತ್ರಿ ಭಾಯಿ ಪುಲೆಯವರ ಹೆಸರಿನಲ್ಲಿ ಆದರ್ಶ ಶಿಕ್ಷಕಿ ಪ್ರಶಸ್ತಿ ಆರಂಭಿಸಲಾಗಿದೆ. ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಮಹಿಳೆಯರು ಆರಂಭಿಸಿರುವ ಸ್ಟಾರ್ಟ್‍ಅಪ್‍ಗಳಿಗೆ 10 ಲಕ್ಷ ನೇರ ಸಾಲ ಯೋಜನೆ ತರಲಾಗಿದೆ. ಹೆಣ್ಣುಮಕ್ಕಳ ಆತ್ಮ ರಕ್ಷಣೆಗಾಗಿ ಕರಾಟೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಆಸಿಡ್ ದಾಳಿಗೆ ಒಳಗಾದವರಿಗೆ ಮಾಶಾಸನ 3 ಸಾವಿರದಿಂದ 10 ಸಾವಿರಕ್ಕೆ ಏರಿಸಲಾಗಿದೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದ ಅವರು, ಮನೆ ಕಟ್ಟುವ ಮಹಿಳೆಯರು ಇಂದು ದೇಶ ಕಟ್ಟುತ್ತಿದ್ದಾರೆ, ಏಕೆಂದರೆ ದೇಶಕ್ಕೆ ಬಜೆಟ್ ಕೊಟ್ಟಿದ್ದು ಒಬ್ಬ ಮಹಿಳೆ, ಇನ್ಫೋಸಿಸ್‍ನ ಸುಧಾಮೂರ್ತಿ, ಬಯೋಕಾನ್‍ನ ಕಿರಣ್ ಅವರು ಸೇರಿದಂತೆ ಅನೇಕ ಮಹಿಳೆಯರು ಸಾಧನೆಯ ಮೂಲಕ ಮಾದರಿಯಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಮಾತನಾಡಿ, ಆಧುನಿಕ ಆಡಳಿತದಲ್ಲಿ ಹೆಣ್ಣು ತನ್ನದೇ ವೈಶಿಷ್ಟತೆಯನ್ನು ಹೊಂದಿದ್ದಾಳೆ. ಈ ಹಿಂದೆ ಮಹಿಳೆಯರಿಗೆ ಅಭಿವೃದ್ಧಿ ಕಲ್ಪಿಸಲಾಗುತ್ತಿತ್ತು, ಆದರೆ ಈಗ ಮಹಿಳೆಯರಿಂದ ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದರು.
ಕಿತ್ತೂರುರಾಣಿ ಚೆನ್ನಮ್ಮ, ಒನಕೆ ಓಬವ್ವ ಸೇರಿದಂತೆ ಮುಂತಾದವರು ಈ ನೆಲಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್‍ನಿಂದ ಮಹಿಳೆಯರನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಮಹಿಳೆಯರಿಗೆ ಸ್ವಸಹಾಯ ಗುಂಪುಗಳು ಸೇರಿದಂತೆ ವಿವಿಧ ಯೋಜನೆಗಳನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಡಿಯಲ್ಲಿ ಉತ್ತಮ ಜಿಪಿಎಲ್‍ಎಂ ಸಾಧನೆಗೈದ ಗ್ರಾಮ ಪಂಚಾಯಿತಿ ಒಕ್ಕೂಟ ಸಂಡೂರು ತಾಲೂಕಿನ ವಡ್ಡು ಗ್ರಾಮದ ಹಳ್ಳದರಾಯ ಸಂಜೀವಿನಿ ಜಿಪಿಎಲ್‍ಎಂ ಸ್ವ-ಸಹಾಯ ಸಂಘಕ್ಕೆ ಪ್ರಥಮ ಬಹುಮಾನ, ದ್ವಿತೀಯ ಬಹುಮಾನವಾಗಿ ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ತುಂಗಭದ್ರಾ ಸಂಜೀವಿನಿ ಜಿಪಿಎಲ್‍ಎಂ ಸ್ವ-ಸಹಾಯ ಸಂಘ, ತೃತೀಯ ಬಹುಮಾನವಾಗಿ ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ಅರುಣೋದಯ ಜಿಪಿಎಲ್‍ಎಂ ಸ್ವ-ಸಹಾಯ ಸಂಘಗಳಿಗೆ ಸನ್ಮಾನಿಸಲಾಯಿತು.
ನಂತರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
 ಮಾರಾಟ ಮೇಳ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ನಗರದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಸ್ವ-ಸಹಾಯ ಗುಂಪುಗಳು ಉತ್ಪಾದಿಸಿದ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಗಮನಸೆಳೆಯಿತು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಪ್ರತಿ ಮಳಿಗೆಗೂ ಭೇಟಿ ನೀಡಿ ಉದ್ಘಾಟಿಸಿ ಸ್ವ-ಸಹಾಯ ಗುಂಪುಗಳು ಉತ್ಪಾದಿಸಿದ ಉತ್ಪನ್ನಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಧಮನಿತ ಮಹಿಳೆಯರಿಂದ ತಯಾರಿಸಲ್ಪಟ್ಟ ಶೇಂಗಾ ಚೆಕ್ಕಿಗಳು, ಇತರೆ ಸ್ವಸಹಾಯ ಸಂಘಗಳಿಂದ ಖಾರದ ಪುಡಿ ಮತ್ತು ಅಡುಗೆ ಸಂಬಂಧಿತ ವಸ್ತುಗಳು, ದಿನಸಿ ತಿಂಡಿಗಳು ಸೇರಿದಂತೆ ವಿವಿಧ ಮಳಿಗೆಗಳಲ್ಲಿನ ಉತ್ಪನ್ನಗಳ ಪ್ರದರ್ಶನವು ಮಹಿಳಾ ದಿನಾಚರಣೆಗೆ ಆಗಮಿಸಿದ್ದ ಜನರ ಗಮನಸೆಳೆದವು.
ಜನರು ಸಹ ಅತ್ಯಂತ ಕುತೂಹಲಿಗಳಾಗಿ ಮಳಿಗೆಗಳಿಗೆ ಬಂದು ವೀಕ್ಷಿಸುತ್ತಿರುವುದು ಮತ್ತು ಖರೀದಿ ಮಾಡುತ್ತಿರುವವುದು ಕಂಡು ಬಂತು.