ಹೆಣ್ಣು ಹೆತ್ತ ಕಾರಣಕ್ಕೆ ಮಹಿಳೆಗೆ ಗಂಡನ ಮನೆಯವರ ಕಿರುಕುಳ

ಕಲಬುರಗಿ,ಮೇ.12-ಹೆಣ್ಣು ಮಕ್ಕಳನ್ನು ಹೆತ್ತ ಕಾರಣಕ್ಕೆ ಗಂಡ, ಅತ್ತೆ, ಮಾವ, ಮೈದುನ, ನಾದಿನಿಯರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕಲಬುರಗಿ ತಾಲ್ಲೂಕಿನ ಮೈನಾಳ ಗ್ರಾಮದ ಮಹೆಬೂಬಿ ಗಂಡ ಮಹ್ಮದ್ದ ಮುಲ್ಲಾ ಎಂಬುವವರೆ ದೂರು ಸಲ್ಲಿಸಿದ್ದು, 8 ವರ್ಷಗಳ ಹಿಂದೆ ಮೈನಾಳ ಗ್ರಾಮದ ಮಹೆಬೂಬಿ ಅವರು ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದ ಮಹ್ಮದ್ ಮುಲ್ಲಾ ಅವರ ಜೊತೆ ಮದುವೆಯಾಗಿದೆ. ಮದುವೆ ಸಂದರ್ಭದಲ್ಲಿ ಒಂದುವರೆ ತೊಲೆ ಬಂಗಾರ, 25 ಸಾವಿರ ರೂ.ನಗದು ಮತ್ತು ಗೃಹ ಬಳಕೆಯ ಸಾಮಾನುಗಳನ್ನು ನೀಡಲಾಗಿದೆ. ಮದುವೆಯಾದ ಒಂದು ವರ್ಷದವರೆಗೆ ಸರಿಯಾಗಿ ನೋಡಿಕೊಂಡ ಗಂಡನ ಮನೆಯವರು ಆ ನಂತರ ಎರಡು ಹೆಣ್ಣು ಮಕ್ಕಳಾದ ಮೇಲೆ ಕಿರುಕುಳ ನೀಡಿ ತವರು ಮನೆಯಿಂದ ಹಣ, ಬಂಗಾರ ತರುವಂತೆ ಪೀಡಿಸಿದ್ದಾರೆ. ಇದರಿಂದ ಬೇಸತ್ತು ಮಹೆಬೂಬಿ ಅವರು ತವರು ಮನೆಯಾದ ಮೈನಾಳ ಗ್ರಾಮಕ್ಕೆ ಹೋಗಿ ನೆಲೆಸಿದ್ದಾರೆ. ಮೇ.9 ರಂದು ಪತಿ ಮಹ್ಮದ್ ಮುಲ್ಲಾ, ಇಮಿಯಾಜ್ಬಿ ಜಾಗೀರದಾರ, ತಸ್ಲೀಮ್ ಬೇಗಂ, ಮುಮ್ತಾಜ್, ನಾದಿನಿಯ ಮಗ ರಿಯಾಜ್, ಇರ್ಫಾನ್, ಸೈಯ್ಯದ್, ಮೈದುನ ಜಾಫರ್ ಅವರು ಮೈನಾಳ ಗ್ರಾಮಕ್ಕೆ ಆಗಮಿಸಿ ಜಗಳ ತೆಗೆದು ಹಲ್ಲೆ ನಡೆಸಿ 1 ತೊಲೆಯ ಮಂಗಳಸೂತ್ರ, ಕಿವಿಯೋಲೆ 2 ಮಾಸಿ ಕೊಳಪತಿ ಹರಿದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.