ಹೆಣ್ಣು ಸಮಾಜದ ಕಣ್ಣು; ಲೀಲಾ

ವಿಜಯಪುರ.ಜ೩೦:ದೇಶದಾದ್ಯಂತ ಹೆಣ್ಣು ಬ್ರೂಣ ಹತ್ಯೆ ಹೆಚ್ಚಾಗುತ್ತಿರುವುದರಿಂದ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದು, ಹೆಣ್ಣು ಸಮಾಜದ ಕಣ್ಣಾಗಿದ್ದು ಮುಂದೆ ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಅ.ಶಿ.ವೈ ಮಹಿಳಾ ಸಂಘದ ಅಧ್ಯಕ್ಷೆ ಲೀಲಾ ರುದ್ರಮೂರ್ತಿ ತಿಳಿಸಿದರು.
ಅವರು ಇಲ್ಲಿನ ಶ್ರೀ ನಗರೇಶ್ವರಸ್ವಾಮಿ ದೇವಾಲಯದಲ್ಲಿ. ಅ.ಶಿ.ವೈ ನಗರ್ತ ಮಹಿಳಾ ಸಂಘ ಮತ್ತು ಅಕ್ಕನ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ “ಅಟ್ಟಗುಣಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದರು.
ಬಹು ಹಿಂದಿನಿಂದಲೂ ನಗರ್ತ ಜನಾಂಗವು ಹೆಣ್ಣು ಮಕ್ಕಳ ಒಳಿತಿಗಾಗಿ ಅಟ್ಟಗುಣಿ ಕಾರ್ಯಕ್ರಮವನ್ನು ಮಹಿಳಾ ಸಂಘದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಅಟ್ಟಗುಣಿ ವಿಶೇಷ;- ಬಹಳ ವಿಶೇಷವಾದ ದಿನ ಬನಹುಣ್ಣಿಮೆಯ ಪ್ರಯುಕ್ತ ನಗರ್ತ ಜನಾಂಗದ .೨ ವರ್ಷದಿಂದ ೧೨ ವರ್ಷದ ಒಳಗಿನ ಹೆಣ್ಣು ಮಕ್ಕಳಿಂದ ಅಟ್ಟಗುಣಿ ಕಾರ್ಯಕ್ರಮವನ್ನು ಅ. ಶಿ. ವೈ. ನಗರ್ತ ಮಹಿಳಾ ಸಂಘ, ಅಕ್ಕನ ಬಳಗ ಹಾಗೂ ಅ. ಶಿ. ವೈ. ನಗರ್ತ ಮಹಂತಿನ ಮಠ ಧರ್ಮಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಸಾಂಪ್ರದಾಯಿಕವಾಗಿ ಪ್ರತಿ ವರ್ಷವೂ ನಗರ್ತ ಮಹಿಳಾ ಸಂಘವು ಆಚರಿಸಿಕೊಂಡು ಬರುತ್ತಿದ್ದು, ಮಕ್ಕಳು ನೂತನ ವಸ್ತ್ರಗಳನ್ನು ಧರಿಸಿ, ದೇವಾಲಯಕ್ಕೆ ಆಗಮಿಸಿ, ಆಚಾರರ ಮನೆಗೆ ತೆರಳಿ,ಆಚಾರರ ಮನೆಯಿಂದ ಹರಿಶಿನದಿಂದ ಸಿಂಗರಿಸಿದ ಗೌರಮ್ಮನವರನ್ನು ತಂದು ಪೂಜಿಸಿ, ಮಕ್ಕಳ ಕಡೆಯಿಂದ ಮೂರು, ಐದು, ಒಂಬತ್ತು ಅಕ್ಕಿಯ ಹಿಟ್ಟಿನಿಂದ ದೀಪಾರತಿ ಮಾಡಿ,ಊರಿನ ಬಾಗಿಲು, ತಿಪ್ಪಮ್ಮ, ಗಾಣದಮ್ಮನಿಗೆ ಮಕ್ಕಳಿಂದ ಪೂಜೆ ಮಾಡಿಸಿ ದೀಪಾರತಿ ಬೆಳಗಿ ಹುಗ್ಗಿಯ ಅನ್ನ ಮೂರು ಪಿಡಿಚೆ ಎಡೆಯಿಟ್ಟು, ಮಾಳಮ್ಮ ದೇವತೆಯನ್ನು ಉಡಿ ತುಂಬಿ, ತಂದು, ಕುದುರು(ಒರಳಿನಲ್ಲಿ ಧಾನ್ಯಗಳನ್ನು ಥಳಿಸುವಾಗ ಹೊರಗೆ ಕಾಳು ಸಿಡಿದು ಹೋಗದಂತೆ ಇಡುವ ಸಾಧನ) ಹಾಗೂ ಓನಕೆಯನ್ನಿಟ್ಟು ಪೂಜೆ ಸಲ್ಲಿಸಿ, ಆರತಿ ತಟ್ಟೆಗಳೊಂದಿಗೆ ಹುಗ್ಗಿಯ ಅನ್ನ ಹಾಗೂ ದೀಪಗಳನ್ನು ಬೆಳಗಿಸಿಕೊಂಡು ಊರಲ್ಲಿ ಮೆರವಣಿಗೆ ಹೊರಟು ಗಾಣಮ್ಮ ಹಾಗೂ ತಿಪ್ಪಮ್ಮನನ್ನು ಊಟಕ್ಕೆ ಆಹ್ವಾನಿಸಿ, ಬಂದು. ವಯಸ್ಸಾದ ವಿಧವೆಯೊಬ್ಬರನ್ನು ಕುಳ್ಳಿರಿಸಿ, ಅವರ ಬೆನ್ನಿಗೆ ಮಕ್ಕಳು ಒಂದೊಂದು ಏಟು ಹೊಡೆದು, ಕಾಣಿಕೆ ನೀಡಿ, ಊಟವಿಟ್ಟು ಗೌರಮ್ಮನಿಗೆ ಅಕ್ಕಿ ಬೆಲ್ಲವನ್ನು ಮಡಿಲು ಕಟ್ಟಿ ಕಳುಹಿಸಲಾಗುವುದು.
ಒಳಿತಿನ ನಂಬಿಕೆ;- ಈ ಆಚರಣೆಯಿಂದ ಮಕ್ಕಳಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಬೇರೂರಿದ್ದು, ಅದಕ್ಕಾಗಿ ಸಾಕ್ಷಿ ಎಂಬಂತೆ ವಿಜಯಪುರ ಹಾಗೂ ಸುತ್ತಮುತ್ತಲ ಊರುಗಳ ಮಹಿಳೆಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಿಳಾ ಸಂಘದ ಮಾಜಿ ಅಧ್ಯಕ್ಷರುಗಳಾz ಕಲಾ ರುದ್ರಮೂರ್ತಿ, ಮಹದೇವಮ್ಮ ಬಸವರಾಜು, ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು, ನೂರಾರು ಮಹಿಳೆಯರು ತಮ್ಮ ಮಕ್ಕಳನ್ನು ಕರೆತಂದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.