ಹೆಣ್ಣು ಮನಸ್ಸು ಮಾಡಿದರೆ ಏನೂ ಬೇಕಾದರೂ ಸಾಧಿಸಬಲ್ಲಳು: ಡಾ. ಜ್ಯೋತಿ

ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.21: ಮನಸ್ಸಿದ್ದರೆ ಮಾರ್ಗ ಎಂಬಂತೆ ಒಂದು ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಎಂದು ಬೆಂಗಳೂರಿನ ವಿಜಯನಗರದ ಸಾಧನಾ ಐ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸೆಂಟರ್‍ನ ನಿರ್ದೇಶಕಿ ಡಾ. ಜ್ಯೋತಿ ಕೆ.ಸಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಸ್ವಾಗತ ಕೋರುವ ಪುತ್ರಿಯರ ದಿನ – ಸ್ಪಂದನ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಧನೆ ಮಾಡಲು ಕಲಿಕೆಯ ಹಸಿವಿರಬೇಕು, ಹಾಗೆಯೇ ಸಾಧಿಸುವ ಛಲವು ಇರಬೇಕು. ಆಗ ನಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ಪರಿಶ್ರಮವಿಲ್ಲದೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ತಮ್ಮ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ನೀವು ಗುರಿಯನ್ನು ತಲುಪಲು ಅನೇಕ ಅಡೆತಡೆಗಳು ಎದುರಾಗುತ್ತವೆ. ಆ ಅಡೆತಡೆಗಳನ್ನು ಎದುರಿಸಿ ನಿಲ್ಲಬೇಕು ಜೊತೆಗೆ ನೀವು ಪರಿಶ್ರಮ ಪಟ್ಟರೆ ಮಾತ್ರ ಯಶಸ್ಸನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.
ನಮ್ಮ ಯಶಸ್ಸನ್ನು, ನಮ್ಮ ಗುರಿಯನ್ನು ತುಳಿಯಲು ಅನೇಕ ಜನರು ಕಾಯುತ್ತಾ ಕುಳಿತಿರುತ್ತಾರೆ. ನಮ್ಮನ್ನು ಅವಮಾನ ಮಾಡುವವರ ಮುಂದೆ ನಾವು ತಲೆ ಎತ್ತಿ ನಿಲ್ಲಬೇಕು. ನಮಗೆ ಅವಮಾನ ಮಾಡಿದವರನ್ನು ಎಂದಿಗೂ ಮರೆಯಬಾರದು. ನಮ್ಮ ಸಾಮಥ್ರ್ಯದ ಪರಿಚಯವನ್ನು ಅವರಿಗೆ ಮಾಡಿಸಬೇಕು. ಅಷ್ಟೇ ಅಲ್ಲದೇ ನಾವು ಏನನ್ನು ಮಾಡಲು ಹೊರಟಿದ್ದೇವೆ ಎಂಬುದರ ಸ್ಪಷ್ಟತೆ ನಮಗಿರಬೇಕು. ವಯಸ್ಸಿನಲ್ಲಿ ತಪ್ಪು ಮಾಡುವುದ ಸಹಜ. ಆದರೆ ನಮ್ಮ ಗುರಿಯನ್ನು ಮರೆತು, ಪ್ರೀತಿ ಪ್ರೇಮ ಎಂಬ ಅಮಲಿಗೆ ಬಿದ್ದು ನಿಮ್ಮ ತಂದೆ-ತಾಯಿಯ ಕನಸನ್ನು ಹುಸಿಗೊಳಿಸಬೇಡಿ. ನಿಮ್ಮ ಗುರಿಯತ್ತ ನಿಮ್ಮ ಲಕ್ಷ್ಯವಿರಲಿ ಎಂದರು. ನಮಗೆ ಕಲಿಯುವ ಛಲ ಸಾಧಿಸುವ ಹಸಿವಿದ್ದರೆ ನಮ್ಮ ಸಾಧನೆಗೆ ಮತ್ತು ಯಶಸ್ಸಿಗೆ ಎಂದೂ ಆಯಾಸವಾಗುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಸಚಿವ ಶಂಕರಗೌಡ ಸೋಮನಾಳ, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೆ ಇರುತ್ತಾಳೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು. ಸಾಧನೆ ಎಂಬುದು ಒಂದು ತಪಸ್ಸು. ಅದನ್ನು ಸಾಧಿಸುವ ದಾರಿ ಬಲು ಕಠಿಣ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಗೆಲ್ಲಬೇಕಾದರೆ ಓದು ಒಂದೇ ಮಾರ್ಗ. ಕಷ್ಟಪಟ್ಟು ಬಿತ್ತಿದ ಬೀಜ ಸ್ವಲ್ಪ ತಡವಾದರು ಸಹ ಒಂದು ದಿನ ಫಲ ಕೊಟ್ಟೆ ಕೊಡುತ್ತದೆ. ಹಾಗೇ ನಮ್ಮ ಜೀವನದಲ್ಲಿ ನಾವು ಕಷ್ಟ ಪಟ್ಟು ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದಾಗ ಮಾತ್ರ ನಮ್ಮ ಜೀವನಕ್ಕೆ ಒಂದು ಅರ್ಥ ಸಿಗುತ್ತದೆ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿಯರು ಮಹಿಳಾ ಗೀತೆಯನ್ನು ಹಾಡಿದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಶಾಂತಾದೇವಿ.ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಭಾರತಿ ಗಾಣಿಗೇರ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಡಾ.ಅಶ್ವಿನಿ ಕೆ.ಎನ್. ನಿರೂಪಿಸಿದರು. ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಆಶಾ ಭಾವಿಕರ ವಂದಿಸಿದರು.