ಕಲಬುರಗಿ,ಸೆ.25-ಬರಿ ಹೆಣ್ಣು ಮಗು ಹೆರುತೀಯ, ಮನೆಗೆಲಸ ಸರಿಯಾಗಿ ಮಾಡಲು ಬರುವುದಿಲ್ಲ, ಬಟ್ಟೆ ತೊಳೆಯಲು ಬರುವುದಿಲ್ಲ, ತವರು ಮನೆಯಿಂದ 5 ತೊಲೆ ಬಂಗಾರ ತೆಗೆದುಕೊಂಡು ಬರುವಂತೆ ಗಂಡ ಮತ್ತು ಆತನ ಮನೆಯವರು ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಬಸವೇಶ್ವರ ಕಾಲೋನಿಯ ನಾಗರತ್ನ ಅಲಿಯಾಸ್ ಪಲ್ಲವಿ ತುಪ್ಪದ್ (36) ಎಂಬುವವರೆ ದೂರು ಸಲ್ಲಿಸಿದ್ದು, ಗಂಡ ಸಿದ್ರಾಮಪ್ಪ ತುಪ್ಪದ್, ಅತ್ತೆ, ನಾದಿನಿಯರಾದ ಗೀತಾ, ರೇಣುಕಾ, ಮಂಜುಳಾ ಮತ್ತು ಆರತಿ ತನಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯಾದ ಒಂದು ವರ್ಷದವರೆಗೆ ಸರಿಯಾಗಿ ನೋಡಿಕೊಂಡು ನಂತರ ಕಿರುಕುಳ ನೀಡಲು ಆರಂಭಿಸಿದ್ದಾರೆ. ಮದುವೆ ವೇಳೆ 20 ತೊಲೆ ಬಂಗಾರ, ಗೃಹ ಬಳಕೆಯ ಸಾಮಾನ ನೀಡಲಾಗಿದೆ. ಸಾಕ್ಷಿ (10), ರಕ್ಷಾ (8) ಮತ್ತು ರಾಮಚರಣ್ (3) ಎಂಬ ಮೂರು ಮಕ್ಕಳಿವೆ. 2ನೇ ಹೆರಿಗೆಯಾಗಿ ಹೆಣ್ಣು ಮಗುವಾದಾಗ ಬರಿ ಹೆಣ್ಣು ಹೆರುತಿ ಅಂತ ಕಿರುಕುಳ ನೀಡಿದ್ದಾರೆ. ನಿನ್ನ ಅಣ್ಣನ ಹೆಂಡತಿಯ ಕುಬುಸದ ಕಾರಣಕ್ಕೆ ಹೋಗಬೇಕಾದರೆ ತವರು ಮನೆಯಿಂದ 5 ತೊಲೆ ಬಂಗಾರ ತರುವಂತೆ ಕಿರುಕುಳ ನೀಡಿ ಹೊಡೆಬಡೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ನಡೆದಿದೆ.