ಹೆಣ್ಣು ಮಗು ಹುಟ್ಟಿತ್ತೆಂದು ಸಂತಸ; ಹೆಲಿಕ್ಯಾಪ್ಟರ್ ಮೂಲಕ ಮನೆಗೆ ಕರೆತಂದ ತಾತ


ನಾಗೂರ್ (ರಾಜಸ್ಥಾನ), ಏ. ೨೩: ಹೆಣ್ಣು ಮಗು ಹುಟ್ಟಲಿದೆಯೆಂದು ಭ್ರೂಣಹತ್ಯೆ ಮಾಡುವ ಈ ಕಾಲಮಾನದಲ್ಲಿಂದು ರಾಜಸ್ಥಾನದ ನಾಗೂರ್ ಜಿಲ್ಲೆಯ ಹರಸ್ಲೋವಾ ಎಂಬ ಹಳ್ಳಿಯಲ್ಲಿ ೩೫ ವರ್ಷಗಳ ನಂತರ ಜನಿಸಿದ ಮೊದಲ ಹೆಣ್ಣು ಮಗುವನ್ನು ಅಜ್ಜನ ಮನೆಯವರು ಹೆಲಿಕ್ಯಾಪ್ಟರ್ ಮೂಲಕ ಕರೆತಂದು ಅದ್ದೂರಿ ಸ್ವಾಗತ ನೀಡಿದ್ದಾರೆ.
ಹನುಮಾನ್ ಪ್ರಜಾಪಂತ್ ಮತ್ತು ಚುಕಿದೇವಿ ಅವರ ದಂಪತಿಯ ಮಗಳು ರಿಯಾಗೆ ಮಾರ್ಚ್ ೩ರಂದು ಹೆಣ್ಣು ಮಗುವೊಂದು ಜನಿಸಿತು. ತಂದೆ ಮನೆಯಿಂದ ತಮ್ಮ ಮನೆಗೆ ಮುದ್ದು ಮೊಮ್ಮಗಳನ್ನು ಪ್ರಜಾಪಂತ್, ಹೆಲಿಕ್ಯಾಪ್ಟರ್ ಮೂಲಕ ಬರಮಾಡಿಕೊಂಡರು. ಅದಕ್ಕಾಗಿ ಪ್ರಜಾಪಂತ್ ಕುಟುಂಬ ೫ ಲಕ್ಷ ರೂಪಾಯಿ ವ್ಯಯಮಾಡಿದೆ. ಅದೂ, ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಿ, ಮೊಮ್ಮಗಳಿಗೆ ಹೆಲಿಕ್ಯಾಪ್ಟರ್ ಮೂಲಕ ಅದ್ದೂರಿ ಸ್ವಾಗತ ನೀಡಿದ್ದಾರೆ.
ಹೆಣ್ಣು ಮಗುವನ್ನು ಜನಸಿದ ಕೂಡಲೇ ಮೂಗುಮುರಿಯುವ ಜನರ ನಡುವೆ ಹೆಣ್ಣು ಮಗು ಹುಟ್ಟಿತೆಂದು ಖುಷಿಪಟ್ಟು, ಅಯಾಸವಿಲ್ಲದೆ, ಸುಖವಾಗಿ ತಮ್ಮ ಮನೆಗೆ ಮೊಮ್ಮಗಳು ಬರಲಿ ಎಂದು ಪ್ರಜಾಪಂತ್, ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಿರುವುದಕ್ಕೆ ಸಂಬಂಧಿಕರು ಮತ್ತು ಹಳ್ಳಿಗರ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ೧೦ ವರ್ಷಗಳ ಹಿಂದೆಯೇ ತಮ್ಮ ಕುಟುಂಬಕ್ಕೆ ಹೆಣ್ಣು ಮಗುವಾದರೆ ಹೆಲಿಕ್ಯಾಪ್ಟರ್ ಮೂಲಕ ಅದ್ದೂರಿಯಾಗಿ ಮನೆ ತುಂಬಿಸಿಕೊಳ್ಳಬೇಕೆಂದು ನಿಶ್ಚಿಯಿಸಿದ್ದು, ಅದರಂತೆ ಆ ಆಸೆ ಈಗ ಈಡೇರಿದೆ ಎಂದು ತಾತಾ ಪ್ರಜಾಪಂತ್ ಸಂತಸ ವ್ಯಕ್ತಪಡಿಸಿದ್ದಾರೆ.