ಹೆಣ್ಣು ಮಕ್ಕಳ ಮಹತ್ವ ಸಾರಲು ಪುತ್ರಿಯರ ದಿನಾಚರಣೆ


ಇಂದು ಪುತ್ರಿಯರ ದಿನ. ಪುತ್ರಿಯರ ದಿನ ಎನ್ನುವುದರಲ್ಲೇ ಸ್ಪಷ್ಟವಾಗುತ್ತದೆ ಈ ದಿನವನ್ನು ಮಗಳಿಗಾಗಿ ಮೀಸಲಾಗಿಡಲಾಗಿದೆ ಎಂದು. ಹೌದು ಹೆಣ್ಣು ಮಗುವಿಲ್ಲದ ಮನೆ, ಚಂದ್ರನಿಲ್ಲದ ಬಾನಿನಂತೆ’ ಎಂಬ ಮಾತನ್ನು ಕೇಳಿರುತ್ತೀರಿ. ಈ ಒಂದು ವಾಕ್ಯವೇ ಸಾಕು, ಹೆಣ್ಣು ಮಗುವಿನ ಅಥವಾ ಪುತ್ರಿಯರ ಮಹತ್ವವನ್ನು ಸಾರಲು. ಇಂತಹ ಪುತ್ರಿಯರಿಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಅದೇ ಅಂತಾರಾಷ್ಟ್ರೀಯ ಪುತ್ರಿಯರ ದಿನ

ಗಂಡಾಗಲಿ, ಹೆಣ್ಣಾಗಲಿ ಮಕ್ಕಳನ್ನು ದೇವರು ನಮಗೆ ಕೊಟ್ಟ ಅಮೂಲ್ಯ ಉಡುಗೊರೆ ಎಂದು ಪರಿಗಣಿಸಲಾಗುತ್ತದೆ. ಬದುಕಿನ ಅವಿಭಾಜ್ಯ ಅಂಗವಾದ ಪುತ್ರಿಯೊಂದಿಗಿನ ಬಾಂಧವ್ಯ ದಿನ ಪ್ರತಿದಿನವೂ ಪ್ರವರ್ಧಿಸುವಂಥದ್ದು. ಆದರೆ ಅಮ್ಮಂದಿರ ದಿನ, ಅಪ್ಪಂದಿರ ದಿನದಂತೆ ಈ ಸುಂದರ ಸಂಬಂಧದ ಮಹತ್ವ ತಿಳಿಸಲು, ಈ ಸಂಬಂಧವನ್ನು ಗೌರವಿಸಲು ಈ ದಿನದ ಆಚರಣೆ.

ಒಂದು ಕಾಲದಲ್ಲಿ ಹೆಣ್ಣು ಹುಟ್ಟುವುದನ್ನೇ ಕೀಳಾಗಿ ನೋಡಲಾಗುತ್ತಿದೆ. ಆದರೆ ಇಂದು ವಾತಾವರಣ ಬದಲಾಗಿದೆ. ಅನೇಕ ಮಂದಿ ಹೆಣ್ಣು ಮಕ್ಕಳ ಜನನವಾಗಲಿ ಎಂದು ಬಯಸುತ್ತಿದ್ದಾರೆ, ಅಲ್ಲದೇ ಪುತ್ರಿಯರ ಸಾಧನೆ ಕಂಡು ಸಂತಸಪಡುತ್ತಿದ್ದಾರೆ. ಅಷ್ಟೆ ಅಲ್ಲದೇ ಇಂದು ಗಂಡು ಮಕ್ಕಳೇ ಒಂದು ಎಷ್ಟೊ ಮಂದಿ ಜಗಳವಾಡುತ್ತ ಪತ್ನಿಯರಿಗೆ ಚಿತ್ರ ಹಿಂಸೆ ನೀಡುತ್ತಿರುವುದು ವಿಪರ್ಯಾಸ.

ಮಗ, ಮಗಳು ಅಥವಾ ಮಕ್ಕಳಿಗಾಗಿ ಸಡಗರ ಪಡಲು ನಿರ್ದಿಷ್ಟ ದಿನ ಬೇಕೆಂದಿಲ್ಲ. ಮನೆಮನಸ್ಸುಗಳಿಗೆ ಸದಾ ಹಬ್ಬವೆನಿಸುವ ಮಕ್ಕಳೆಂದರೆ ಸಾಕು ಅದೇ ಸಂಭ್ರಮ, ಸಡಗರ. ಆದರೆ ಪಿತೃಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಇಂದು ಕೂಡ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗಿಂತ ಕೀಳೆಂಬ ದೃಷ್ಟಿಯಲ್ಲಿ ನೋಡುತ್ತಿರುವುದು ಕಂಡುಬರುತ್ತದೆ. ಈ ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆಯನ್ನು ಪ್ರಚುರ ಪಡಿಸುವ ದೃಷ್ಟಿಯಿಂದ ವಿವಿಧ ದೇಶಗಳು ಮಗಳ ದಿನವನ್ನು ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ನಿರ್ಧರಿಸಿವೆ. ಸರಕಾರ ಮತ್ತು ಕಾನೂನಿನ ಮುಂದೆ ಪ್ರತಿ ನಾಗರಿಕ ಸರಿಸಮಾನ ಎಂಬುದನ್ನು ಪ್ರತಿಯೊಬ್ಬರಿಗೆ ಮನವರಿಕೆ ಮಾಡಿಸುವುದು ಇದರ ಉದ್ದೇಶ.

ಈ ದಿನದ ಆಚರಣೆ ವರ್ಷದಿಂದ ವರ್ಷಕ್ಕೆ ಪರಿಣಾಮಕಾರಿಯಾಗುತ್ತಿದ್ದು, ಮೌಢ್ಯ, ಪೂರ್ವಗ್ರಹಗಳನ್ನು ಬದಿಗೆ ಸರಿಸುತ್ತ ಕಾಲ ಹೇಗೆ ಬದಲಾಗುತ್ತಿದೆ ಎಂಬುದನ್ನು ಈ ಆಚರಣೆಯ ಯಶಸ್ಸು ತೋರಿಸುತ್ತದೆ. ಹೆಣ್ಣುಮಕ್ಕಳಿರುವ ಕುಟುಂಬಗಳು ಈ ದಿನವನ್ನು ಸಂತೋಷದಿಂದ ಆಚರಿಸುತ್ತಾರೆ. ಅದರಲ್ಲೂ ಈ ದಿನ ರಜಾದಿನವಾದ ಭಾನುವಾರವಾಗಿರುವುದರಿಂದ ಪುತ್ರಿಯರು ಮತ್ತು ಪೋಷಕರು ಜತೆಗೂಡಿ ಸಂಭ್ರಮದಿಂದ ಆಚರಿಸುತ್ತಾರೆ.

ತಮ್ಮ ಬದುಕಿನ , ಸಂತೋಷ ಕನಸಾದ ಪುತ್ರಿಯರ ದಿನವನ್ನು ತಮಗಿಷ್ಟ ಕಂಡಂತೆ ಆಚರಿಸಲಾಗುತ್ತದೆ. ಇದು ಕುಟುಂಬದಿಂದ ಕುಟುಂಬಕ್ಕೆ ಭಿನ್ನವಾಗಿದ್ದು ಪುತ್ರಿ ಮತ್ತು ಪೋಷಕರ ನಡುವೆ ಎಂತಹ ಅನುಬಂಧವಿದೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಕೆಲವರು ಕುಟುಂಬದ ದೊಡ್ಡ ಉತ್ಸವವಾಗಿ ಇದನ್ನು ಆಚರಿಸಬಹುದು. ದೂರದಲ್ಲಿರುವ ಪುತ್ರಿಯರಿಗೆ ಪ್ರೀತಿಯ ಸಂದೇಶದ ಕಾರ್ಡ್ , ಪತ್ರ , ಅದರ ಜತೆಗೊಂಡು ಉಡುಗೊರೆ ಕಳಿಸಬಹುದು. ಮಗಳಿಗಿಷ್ಟವಾದುದನ್ನು ಕೊಡಿಸಬಹುದು. ಪಿಕ್‌ನಿಕ್‌ಗೆ ಕರೆದೊಯ್ಯಬಹುದು ಅಥವಾ ಮಗಳ ಇಷ್ಟದಂತೆ ಈ ದಿನವನ್ನು ಆಚರಿಸಬಹುದು

ಪ್ರಪಂಚದ ಇತರ ದೇಶಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಹೆಣ್ಣು ಮಗು ಎಂದು ಯಾವಾಗಲೂ ಒಂದು ನಿರ್ದಿಷ್ಟ ಕಳಂಕವಿದೆ, ಇನ್ನು ಕೆಲವೆಡೆ ಮಹಿಳೆ ಹೆಣ್ಣಿಗೆ ಜನ್ಮ ನೀಡಿದಾಗ ಆಕೆಗೆ ದಂಡ ವಿಧಿಸಲಾಗುತ್ತದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಹೆಚ್ಚಾಗಿ ಹೆಣ್ಣು ಮಕ್ಕಳನ್ನು ಹೊರೆಯಾಗಿ ನೋಡಿದರೆ, ಇತರ ರಾಷ್ಟ್ರಗಳು ಆಚರಣೆ ಮಾಡುವ ಮೂಲಕ ಗೌರವ ಸಲ್ಲಿಸುತ್ತಿದೆ.

ಅಮೆರಿಕದ ಇತಿಹಾಸದುದ್ದಕ್ಕೂ ಮಹಿಳೆಯರು ಭೀಕರವಾದ ಅಡೆತಡೆಗಳನ್ನು ಎದುರಿಸಿದ್ದಾರೆ. ಮೊದಲಿನಿಂದಲೂ ಸಮಾಜವು ಮಹಿಳೆಯರನ್ನು ಪುರುಷರಿಗಿಂತ ಕೀಳಾಗಿ ನೋಡುತ್ತಿತ್ತು. “ಹದಿನೆಂಟನೇ ಶತಮಾನದ ಆಂಗ್ಲೋ-ಅಮೇರಿಕನ್ ಸಮಾಜದಲ್ಲಿ ಆರ್ಥಿಕ, ರಾಜಕೀಯ ಅಥವಾ ನಾಗರಿಕ ವಿಷಯಗಳಲ್ಲಿ ಪತ್ನಿಯರ ಸ್ವಾತಂತ್ರ್ಯವನ್ನು ಕಾನೂನು ಗುರುತಿಸಲಿಲ್ಲ. ಆ ಸಮಯದಲ್ಲಿ ಪುರುಷ ಸವಲತ್ತು ಪ್ರಾಬಲ್ಯ ಹೊಂದಿತ್ತು. 1920 ರವರೆಗೆ ಮಹಿಳೆಯರು ಮತದಾನದ ಹಕ್ಕನ್ನು ಪಡೆಯಲಿಲ್ಲ. 1960 ರವರೆಗೂ, ಗಂಡಂದಿರು ಕೆಲಸ ಮಾಡುವಾಗ ಹೆಂಡತಿಯರು ಸಾಮಾನ್ಯವಾಗಿ ಮನೆಯಲ್ಲಿಯೇ ಇದ್ದರು. ಅನೇಕ ವಿಧಗಳಲ್ಲಿ, ಯುಎಸ್ ಇನ್ನೂ ಲಿಂಗ ತಾರತಮ್ಯ ತಾಂಡವಾಡುತ್ತಿದೆ. ಈ ತಾರತಮ್ಯ ಹೋಗಲಾಡಿಸುವ ಸಲುವಾಗಿಯೇ ಪುತ್ರಿಯರ ದಿನ ಹುಟ್ಟುಕೊಂಡಿದೆ ಎನ್ನಬಹುದು.