ಹೆಣ್ಣು‌ ಮಕ್ಕಳಿಗೆ ಸ್ವಯಂ ರಕ್ಷಣೆ ಕುರಿತು ತರಬೇತಿ ನೀಡಿ

ಕಲಬುರಗಿ,ಆ.8: ಅತ್ಯಾಚಾರ ಪ್ರಕರಣಗಳು ಶಿಕ್ಷಿತ ಸಮಾಜ ತಲೆ ತಗ್ಗಿಸುವ ಪ್ರಕರಣಗಳಾಗಿವೆ. ಇದನ್ನು ತಡೆಗಟ್ಟುವ ನೆಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆ ಬಗ್ಗೆ ತರಬೇತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು

ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಪೊಲೀಸ್ ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಂಬಂಧಿತ ಇಲಾಖೆಯ ಎಲ್ಲಾ ಅಧಿಕಾರಿಗಳು ಮಕ್ಕಳಿಗೆ ಈ ನಿಟ್ಟಿನಲ್ಲಿ ಅರಿವು ಮೂಡಿಸುವಲ್ಲಿ ಹೆಚ್ಚು ಪಾತ್ರ ವಹಿಸಿ ಎಂದರು.

ವಿಶೇಷವಾಗಿ ಶಾಲಾ, ಕಾಲೇಜುಣ ವಸತಿ ವಸತಿ ನಿಲಯಗಳಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಸ್ಥಳ, ಒಂಟಿಯಾಗಿದ್ದ ಸಂದರ್ಭದಲ್ಲಿ ವಹಿಸಬೇಕಾದ‌ ಮುನ್ನೆಚ್ಚರಿಕೆ ಕುರಿತು ಹಾಗೂ ಅತ್ಮ‌ರಕ್ಷಣೆ ಕಲೆ ಬಗ್ಗೆ ತರಬೇತಿ ನಿಡುವ ಅವಶ್ಯಕತೆ ಇದೆ ಎಂದು ಡಿ.ಸಿ. ಪ್ರತಿಪಾದಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ‌ ಘಟಕದ ರಕ್ಷಣಾಧಿಕಾರಿ ಮಂಗಳಾ ಪಾಟೀಲ ಅವರು ಮಾತನಾಡಿ, ಹೆಣ್ಣು ಮಕ್ಕಳಿಗೆ ಸ್ವಯಂ ಸುರಕ್ಷತೆ ಮತ್ತು ಕರಾಟೆ ತರಬೇತಿ ನೀಡಲು ಈಗಾಗಲೆ 300 ಜನ ಟ್ರೇನರ್ ಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಮುಂದಿನ ವಾರ ತರಬೇತಿ ನೀಡಲಾಗುತ್ತದೆ. ತದನಂತರ ತರಬೇತುದಾರರ ಮುಖೇನ 34 ದಿನದಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆಯ ಸಹಾಯದಿಂದಿಗೆ ಎಲ್ಲಾ ಶಾಲಾ-ಕಾಲೇಜು ಹಾಗೂ ವಸತಿ ನಿಲಯದಲ್ಲಿನ ಮಕ್ಕಳಿಗೆ ತರಬೇತಿ ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ದೇವಿದಾಸ್, ಹೆಚ್ಚುವರಿ ಎಸ್.ಪಿ.‌ಶ್ರೀನಿಧಿ, ಎ.ಸಿ.ಪಿ. ದೀಪನ್ ಎಂ.ಎನ್., ಮಹಿಳಾ‌ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು., ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ, ಡಿ.ಎಚ್.ಓ ಡಾ.ರಾಜಶೇಖರ ಮಾಲಿ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಿ.ಡಿ.ಪಿ.ಓ ಗಳು ಇದ್ದರು.