ಹೆಣ್ಣು ಮಕ್ಕಳಿಗೂ ಸಮಾನ ಅವಕಾಶಗಳು ಸಿಗಲಿ: ಪ್ರಭು ಚವ್ಹಾಣ

ಬೀದರ:ಜ.25:ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಅವರನ್ನು ತಾತ್ಸಾರ ಮನೋಭಾವದಿಂದ ಕಾಣದೇ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡಬೇಕೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.

ಔರಾದ(ಬಿ) ತಾಲ್ಲೂಕಿನ ಘಮಸುಬಾಯಿ ತಾಂಡಾ ಅಂಗನವಾಡಿ ಕೇಂದ್ರದಲ್ಲಿ ಜನವರಿ 24ರಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಕೈಗಾರಿಕೆ, ಶಿಕ್ಷಣ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯು ಪುರುಷರಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತಲೇ ಬರುತ್ತಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದೆಂದು ಹೇಳಿದರು.

ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಯೋಜನೆ ಜಾರಿಗೊಳಿಸಿದ್ದು, ಇದರಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕೆಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ಮಾತನಾಡಿ, ಹೆಣ್ಣು ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶದ ಮಹತ್ವ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಇದೇ ವೇಳೆ ಹೆಣ್ಣುಮಕ್ಕಳ ತಾಯಿಂದಿಯರಿಗೆ ಹಣ್ಣು ಮತ್ತು ಔಷಧಿ ನೀಡಿ ಗೌರವಿಸಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ಸಂಗಮೇಶ ಕೂಡ್ಲೆ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಫಹಿಮಾ ಹಾಗೂ ಇತರರಿದ್ದರು.