ಹೆಣ್ಣು ಭ್ರೂಣಹತ್ಯೆ: ಅನಿರೀಕ್ಷಿತ ಭೇಟಿಗೆ ನಿರ್ಣಯ

ಬೀದರ ನ.20: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ನವೆಂಬರ್ 18ರಂದು ಭ್ರೂಣ ಪತ್ತೆ ಶಾಸನ 1994ರ ಜಿಲ್ಲಾಮಟ್ಟದ ಸಲಹಾ ಸಮಿತಿ ಸದಸ್ಯರ ಸಭೆ ನಡೆಯಿತು.
ಅನಕ್ಷರಸ್ಥ ಕೆಲವರು ಮತ್ತು ಬಹುತೇಕ ವಿದ್ಯಾವಂತರೇ ಹೆಣ್ಣು ಭ್ರೂಣ ಹತ್ಯಗೆ ಮುಂದಾಗುತ್ತಾರೆ. ಇದು ನಿಜಕ್ಕೂ ಕಳವಳಕಾರಿ ಸಂಗತಿ ಎಂದು ಸಭೆಯಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿದ ಸದಸ್ಯರು, ಸ್ಕ್ಯಾನಿಂಗ್ ಸೆಂಟರ್ಸ ಮತ್ತು ನರ್ಸಿಂಗ್ ಹೋಮ್‍ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಇದಕ್ಕೆ ತಡೆವೊಡ್ಡಬೇಕು ಎಂದು ತೀರ್ಮಾನಿಸಿದರು. ಬೀದರ ಜಿಲ್ಲೆಯಲ್ಲಿ ನಾಲ್ಕು ಕಡೆಗಳಲ್ಲಿ ದಿಢೀರ್ ದಾಳಿ ನಡೆಸಬೇಕು. ಜೊತೆಗೆ ಕೆಲವೊಂದು ಔಷಧಿ ಅಂಗಡಿಗಳ ಮೇಲೆಯೂ ದಾಳಿ ನಡೆಸಿ ಯಾವ ಯಾವ ಔಷಧಿ ನೀಡುತ್ತಿದ್ದಾರೆ, ದಾಸ್ತಾನು ಏನಿದೆ ಎಂಬುದರ ಬಗ್ಗೆ ಪರಿಶೀಲಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಮಕ್ಕಳ ತಜ್ಞರಾದ ಡಾ.ಆನಂದರಾವ್ ಅವರು ಮಾತನಾಡಿ, ಒಂದು ಸ್ಕ್ಯಾನಿಂಗ್ ಸೆಂಟರ್ ನಡೆಸಲು ನಿಯಮಾವಳಿಯಂತೆ ಪ್ರಮಾಣಪತ್ರ ಇರಬೇಕು. ಫಲಕ ಇರಬೇಕು. ಆದರೆ, ಕೆಲವರು ಈ ನಿಯಮವನ್ನು ಪಾಲನೆ ಮಾಡುತ್ತಿಲ್ಲ ಎನ್ನುವ ದೂರುಗಳಿವೆ. ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದಾಗ ಸತ್ಯಾಂಶ ಏನಿದೆ ಎಂಬುದು ತಿಳಿಯುತ್ತದೆ ಎಂದು ಸಲಹೆ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ ಅವರು, ಜಿಲ್ಲೆಯಲ್ಲಿ ಪಿಸಿ ಮತ್ತು ಪಿಎನ್‍ಡಿಟಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒತ್ತು ಕೊಡಬೇಕು ಎಂದರು. ಕಾನೂನುಬಾಹೀರವಾದ ಹೆಣ್ಣು ಭ್ರೂಣ ಹತ್ಯೆ ಮಾಡಬಾರದು. ಹೆಣ್ಣು ಭ್ರೂಣ ಹತ್ಯೆ ನಿರಂತರ ನಡೆದಲ್ಲಿ ಜನಸಂಖ್ಯೆಯಲ್ಲಿ ಏರುಪೇರಾಗಿ ಸಮಾಜದಲ್ಲಿ ಆಘಾತಕಾರಿ ಘಟನೆಗಳು ಸಂಭವಿಸುತ್ತವೆ ಎಂದರು.
ಭ್ರೂಣ ಹತ್ಯೆ ಮಾಡಬಾರದು ಎನ್ನುವ ಗಟ್ಟಿ ಸಂದೇಶವು ಜನರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ತಲುಪಬೇಕು. ಈ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳ, ಅಂಗನವಾಡಿಗಳ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ರೀತಿಯಲ್ಲಿ ಗೋಡೆ ಬರಹ ಮಾಡಿಸಬೇಕು. ಹೆಣ್ಣು ಹುಟ್ಟಿದರೆ ಹುಣ್ಣು ಎನ್ನುವ ಕೀಳು ಮನಸ್ಥಿತಿ ಬಹಳಷ್ಟು ಜನರಲ್ಲಿದೆ. ಇದು ತೊಲಗಬೇಕು. ಗಂಡು ಮಗುವಿನಷ್ಟೇ ಹೆಣ್ಣು ಮಗು ಕೂಡ ಶ್ರೇಷ್ಠ. ಮಹಿಳೆ ಪರುಷನಷ್ಟೇ ಸಮಾನಳು. ಅವಳಲ್ಲೂ ಬುದ್ದಿ ಇದೆ, ಜ್ಞಾನ ಇದೆ ಎಂಬುದು ತಿಳಿಯಬೇಕು. ಈ ಹಿನ್ನೆಲೆಯಲ್ಲಿ ಹೆಣ್ಣು ಮಗುವಿಗೆ ಗೌರವ ಸಿಗುವ ನಿಟ್ಟಿನಲ್ಲಿ ನಗರದ ಯಾವುದಾದರು ಒಂದು ವೃತ್ತಕ್ಕೆ ಭೇಟಿ ಸರ್ಕಲ್ ಎಂದು ನಾಮಕರಣ ಮಾಡಬೇಕು ಎಂದು ಇದೆ ವೇಳೆ ಸಹಯೋಗ ಸಂಸ್ಥೆಯ ಅಧ್ಯಕ್ಷರು ಸಲಹೆ ಮಾಡಿದರು.
ಸಹಯೋಗ ಸಂಸ್ಥೆಯ ಅಧ್ಯಕ್ಷರು ನೀಡಿದ ಸಲಹೆ ಅತ್ಯಂತ ಮಹತ್ವದ್ದಾಗಿದೆ. ಈ ಬಗ್ಗೆ ಕೂಡಲೇ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದು ಕ್ರಮವಹಿಸಲಾಗುವುದು ಎಂದು ಡಿಎಚ್‍ಓ ಅವರು ಪ್ರತಿಕ್ರಿಯಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ತಿಪ್ಪಣ ಪಿ. ಸಿರಸಗಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶಂಕರ, ವಾರ್ತಾಧಿಕಾರಿ ಹಾಗೂ ಭ್ರೂಣ ಪತ್ತೆ ಶಾಸನ 1994ರ ಜಿಲ್ಲಾಮಟ್ಟದ ಸಲಹಾ ಸಮಿತಿ ಸದಸ್ಯರಾದ ಗವಿಸಿದ್ದಪ್ಪ ಹೊಸಮನಿ, ಭಾರತೀಯ ಕುಟುಂಬ ಯೋಜನಾ ಸಂಸ್ಥೆಯ ಬೀದರ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಹಾಗೂ ಇತರರು ಇದ್ದರು.