
ಭಾಲ್ಕಿ:ಮಾ.19: ತಾಯಿಯಾಗಿ, ಹೆಂಡತಿಯಾಗಿ ಹೆಣ್ಣು ಬೇಕು. ಆದರೆ, ಮಗಳಾಗಿ ಏಕೆ ಬೇಡ. ಹೆಣ್ಣು- ಗಂಡು ಎಂಬ ಭೇದ ಬೇಡ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕಲ್ಪಿಸಿ ದೇಶದ ಉತ್ತಮ ಪ್ರಜೆಗಳನ್ನಾಗಿ ಬೆಳೆಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಹೊರವಲಯದ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ಆರ್ಬಿಟ್ ಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನಾದಿ ಕಾಲದಿಂದಲೂ ಮಹಿಳೆಯರಿಗೆ ಗೌರವ ಶ್ರೇಷ್ಠ ಸ್ಥಾನಮಾನವಿದೆ. ಗಂಡು- ಹೆಣ್ಣಿನ ನಡುವೆ ಸಮಾನತೆ ಇರಬೇಕು. ಆದರೆ, ವರದಕ್ಷಿಣೆ ಪಿಡುಗು, ದೌರ್ಜನ್ಯ, ಭ್ರೂಣ ಹತ್ಯೆಯಂತಹ ಕೃತ್ಯಗಳು ಇಂದಿಗೂ ನಡೆಯುತ್ತಿರುವುದು ಕಳವಳ ತರಿಸಿದೆ. ಸ್ವತಂತ್ರ್ಯ ನಂತರದ ಭಾರತದಲ್ಲಿ ಮಾಜಿ ಪ್ರಧಾನಿ ದಿವಗಂತೆ ಇಂದಿರಾ ಗಾಂಧಿ ಅವರು ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟಿದರು. ರಾಜೀವ ಗಾಂಧಿ ಅವಧಿಯಲ್ಲಿ ಮಹಿಳೆಯರಿಗಾಗಿ ಮೀಸಲಾತಿ ತಂದಿರುವ ಪರಿಣಾಮ ಇಂದು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುವಂತಾಗಿದೆ.
ಕ್ರೀಡೆ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಶ್ರೇಷ್ಠವಾಗಿದೆ. ರಾಜ್ಯ ಮತ್ತು ದೇಶದಲ್ಲಿ ಮಹಿಳೆಯರಿಗಾಗಿ ತಂದಿರುವ ಕಾಯಿದೆ ಕಾನೂನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ ಮಹಿಳೆಯರ ಸುರಕ್ಷತೆ ಮತ್ತು ಏಳಿಗೆಗೆ ಶ್ರಮಿಸುವ ಅಗತ್ಯವಿದೆ ಎಂದು ತಿಳಿಸಿದರು.
ಬಾಲಯೇಸು ಪುಣ್ಯಕ್ಷೇತ್ರದ ವಂದನೆಯ ಫಾಧರ್ ಕ್ಲ್ಯಾರಿ ಡಿಸೋಜ ದಿವ್ಯ ಸಾನ್ನಿಧ್ಯ ವಹಿಸಿದರು. ನಿರ್ದೇಶಕ ವಂದನೆಯ ಫಾದರ್ ರೋಕಿ ಡಿಸೋಜ, ವಂದನೆಯ ಫಾದರ್ ಸತೀಶ ಸಾನ್ನಿಧ್ಯ ವಹಿಸಿದರು. ಪುರಸಭೆ ಮಾಜಿ ಸದಸ್ಯ ಸುಕನ್ಯ ರೇಷ್ಮೆ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಬಾಲ ನ್ಯಾಯ ಮಂಡಳಿ ಸದಸ್ಯ ಶಶಿಧರ ಕೋಸಂಬೆ, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೆರೆ, ಚಿನ್ನಮ್ಮ ಬಾವುಗೆ, ವಂದನೆಯ ಫಾದರ ವಿಕ್ಟರ್ ವಾಸ್ ಸೇರಿದಂತೆ ಹಲವರು ಭಾಗವಹಿಸಿದರು.