ಹೆಣ್ಣನ್ನು ಉಳಿಸಿ ಹೆಣ್ಣನ್ನು ಓದಿಸಿ: ಸರುಬಾಯಿ ಪವಾರ

ಚಿಟಗುಪ್ಪ,ಫೆ 20: ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಿಕ್ಷಕ ಸಂಜೀವನ ಭೋಸ್ಲೆ ಲಿಂಗಾನುಪಾತದ ಅಂತರವನ್ನು ಕಡಿಮೆ ಮಾಡುವುದು, ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು ಮತ್ತು ಲಿಂಗ ಅಸಮಾನತೆಯನ್ನು ತೆಗೆದುಹಾಕುವುದು ಯೋಜನೆಯ ಉದ್ದೇಶವಾಗಿದೆ. ಯೋಜನೆಯಡಿ, ಹೆಣ್ಣು ಮಗುವಿಗೆ ಶಿಕ್ಷಣ ಒದಗಿಸಲು ಮತ್ತು ಸಮಾಜದಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಹೆಣ್ಣು ಮಕ್ಕಳ ಹೆಸರಲ್ಲಿ ಬ್ಯಾಂಕ್‍ನಲ್ಲಿ ಹಣ ಇಟ್ಟರೆ ಅವರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಈ ಹಣದಿಂದ ನಿಮ್ಮ ಮಗಳು ತನ್ನ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು. ಆಡಳಿತ ವೈದ್ಯಧಿಕಾರಿ ಡಾ. ವಿಜಯ ಹಿರಸ್ಕರ್ ಮಾತನಾಡಿ ಬೇಟಿ ಬಚಾವೋ ಬೇಟಿ ಪಡಾವೋ ಹೆಣ್ಣು ಮಕ್ಕಳ ಹಿತಾಸಕ್ತಿ ಕಾಪಾಡಲು ಮತ್ತು ಅವರ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಗೌರವಾನ್ವಿತ ಪ್ರಧಾನ ಮಂತ್ರಿಯವರು ಹರಿಯಾಣ ರಾಜ್ಯದ ಪಾಣಿಪತ್‍ನಲ್ಲಿ 22 ಜನವರಿ 2015 ರಂದು (ಬಿಬಿಬಿಪಿ) ಯೋಜನೆಯನ್ನು ಪ್ರಾರಂಭಿಸಿದರು . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಯೋಜನೆಯನ್ನು ಅನುಷ್ಠಾನಗೊಳಿಸಲು ನೋಡಲ್ ಸಚಿವಾಲಯವಾಗಿದೆ. 2011 ರ ಜನಗಣತಿಯು, ಮಕ್ಕಳ ಲಿಂಗ ಅನುಪಾತದಲ್ಲಿ ವ್ಯಾಪಕವಾದ ಮತ್ತು ಗಮನಾರ್ಹವಾದ ಕುಸಿತವನ್ನು ಬಹಿರಂಗಪಡಿಸುತ್ತದೆ, ಇದು ಪ್ರತಿ 1000 ಹುಡುಗರಿಗೆ 918 ಹುಡುಗಿಯರ ಸಾರ್ವಕಾಲಿಕ ಕನಿಷ್ಠ ದಾಖಲೆಯಾಗಿದೆ. 35 ರಲ್ಲಿ 13 ರಾಜ್ಯಗಳು ಮತ್ತು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಹೊಂದಿವೆ. ಆದ್ದರಿಂದ ಭಾರತ ಸರ್ಕಾರವು 2011 ರ ಜನಗಣತಿಯ ಪ್ರಕಾರ ಕಡಿಮೆ ಮಕ್ಕಳ ಲಿಂಗ ಅನುಪಾತದ ಆಧಾರದ ಮೇಲೆ 100 ಜಿಲ್ಲೆಗಳನ್ನು ಆಯ್ಕೆ ಮಾಡಿದೆ, ಪ್ರತಿ ರಾಜ್ಯದಲ್ಲಿ ಕನಿಷ್ಠ ಒಂದು ಜಿಲ್ಲೆಯನ್ನು ಒಳಗೊಂಡಿರುವ ಪ್ರಾಯೋಗಿಕ ಆಧಾರದ ಮೇಲೆ ಎಲ್ಲಾ ರಾಜ್ಯಗಳು ಒಳಗೊಂಡಿದೆ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಮುರಹರಿ ಮಾತನಾಡಿ 2015ರ ಜನವರಿ 22 ರಂದು ಪ್ರಧಾನ ಮಂತ್ರಿಯವರು ಹರಿಯಾಣದ ಪಾಣಿಪತನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಚಾಲನೆ ನೀಡಿದರು. ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ ಎಂದು ತಿಳಿಸಿದರು. ಸರುಬಾಯಿ ಪವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡ್ಡಿ ಹೆಣ್ಣನ್ನು ಉಳಿಸಿ ಹೆಣ್ಣನ್ನು ಓದಿಸಿ ಹೆಣ್ಣು ಕೂಡ ಗಂಡಿನ ಸಮಾನರಾಗಿ ಪ್ರತಿ ಒಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಆದರೂ ಕೂಡ ಲಿಂಗಾನುಪಾತದಲ್ಲಿ ನಾವು ವ್ಯತ್ಯಾಸವನ್ನು ನೋಡುತ್ತಾ ಇದ್ದೇವೆ ಇದನ್ನು ಹೋಗಲಾಡಿಸಬೇಕು ಎಂದರು. ಪತ್ರಕರ್ತ ರಾಜಕುಮಾರ ಆರ್. ಹಡಪದ ಮಾತನಾಡಿದರು. ಆಪ್ತ ಸಮಾಲೋಚಕ ನಂದುಕುಮಾರ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಅರುಣಾ, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಸಹಾಯಕಿಯರು ವಿದ್ಯಾರ್ಥಿಗಳು ಇದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಜೈಶ್ರೀ ರೆಡ್ಡಿ ನಿರೋಪಿಸಿ ವಂದಿಸಿದರು.