ಹೆಣಗಳ ಮೇಲೆ ರಾಜಕೀಯ ಮಾಡುತ್ತಿದೆ ಬಿ.ಜೆ.ಪಿ ಸರ್ಕಾರ: ಶ್ರೀಕಾಂತ ಛಾಯಾಗೋಳ

ವಿಜಯಪುರ, ಎ.24-ಹೆಣಗಳ ಮೇಲೆ ರಾಜಕೀಯ ಮಾಡುತ್ತಿರುವ ರಾಜ್ಯ ಬಿಜೆಪಿ ಸರಕಾರ ಯಾವುದೇ ಗೊತ್ತು ಗುರಿಯಿಲ್ಲದೆ ಕೊರೊನಾ ಕುರಿತು ನಿಯಮಾವಳಿಗನ್ನು ತರುವುದರ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ರೀಕಾಂತ ಛಾಯಾಗೋಳ ಆರೋಪಿಸಿದ್ದಾರೆ.
ಕಳೆದ ನವ್ಹೆಂಬರನಲ್ಲಿಯೇ ತಜ್ಞರ ಸಮಿತಿ ಎಚ್ಚರಿಕೆ ನೀಡಿತ್ತು. ಮಾರ್ಚ ಏಪ್ರೀಲ್ ತಿಂಗಳಲ್ಲಿ ಎರಡನೇ ಅಲೆ ರಾಜ್ಯಕ್ಕೆ ಕಂಟಕವಾಗುತ್ತದೆ ಎಂದು ತಿಳಸಿದ್ದರು. ಆದರೆ ಎಡಬಿಡಂಗಿ ಸರಕಾರ ಚುನಾವಣೆಯಲ್ಲಿ ಭ್ಯೂಸಿಯಾಗಿ ಇಡೀ ರಾಜ್ಯವೇ ಕಂಗಾಲಾಗಿಸಿದೆ. ಕೊರೊನಾ ಸಂಕಷ್ಟದಿಂದ ಸಾರ್ವಜನಿಕರೆಲ್ಲರಿಗೂ ತೊಂದರೆ ಕೊಡುತ್ತಿದ್ದು, ಹೆಣಗಳ ರಾಶಿ ಮೇಲೆ ರಾಜಕೀಯ ಮಾಡುತ್ತಿದೆ. ಶ್ಮಶಾನದಲ್ಲಿಯೂ ಬಿಜೆಪಿಯವರಿಗೆ ಪ್ರಥಮಾಧ್ಯತೆ ಕೊಡಿಸುವ ಕಾರ್ಯದಲ್ಲಿ ಬಿಜೆಪಿ ನಾಯಕರು ತೊಡಗಿರುವುದು ನಾಚಿಕೆಗೇಡಿತನದ ಕೆಲಸವಾಗಿದೆ.
ಇಡೀ ವ್ಯವಸ್ಥೆಯೇ ಹಳ್ಳ ಹಿಡಿಸಿದ್ದಾರೆ. ರಾಜ್ಯದ ಯಾವ ಆಸ್ಪತ್ರೆಗೆ ಹೋದರೂ ಬೆಡ್, ಸಿಗುತ್ತಿಲ್ಲ. ಬೆಡ್ ಇದ್ದರೆ ವೆಂಟಿಲೇಟರ್ ಇಲ್ಲ ಹೀಗಾಗಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಜನಸಾಮಾನ್ಯರಲ್ಲಿ ಆತಂಕದ ಜೊತೆಗೆ ಭಯಾನಕ ವಾತಾವರಣಕ್ಕೆ ಬೆಚ್ಚಿ ಬಿದ್ದಿದ್ದಾರೆ. ಕಣ್ಣ ಮುಂದೆಯೇ ಸಾವು ನೋವಿನ ನರಕದರ್ಶನ ನರ್ತಿಸುವಂತಾಗಿದೆ. ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ತಾಳೆ ಇಲ್ಲದೆ ದಿನಕ್ಕೊಂದು ಗಂಟೆಗೊಂದು ನಿಯಮಗಳನ್ನು ಜಾರಿಗೆ ತರುತ್ತ ವ್ಯಾಪಾರಸ್ಥರಿಗೆ,ಬೀದಿ ಬದಿ ವ್ಯಾಪಾರಿಗಳಿಗೆ ಹೈರಾಣಾಗಿಸಿದ್ದಾರೆ. ಜನಸಮಾನ್ಯರಿಗೆ ಕಾಪಾಡುವ ನಿಟ್ಟಿನಲ್ಲಿ ಸರ್ವಪಕ್ಷಗಳ ಸಹಕಾರ ಪಡೆದು, ಪರಿಸ್ಥಿತಿ ಕೈ ಮೀರುವ ಮುಂಚೆ ಕಟ್ಟುನಿಟ್ಟಿನ ಪಾರದರ್ಶಕ ಕ್ರಮ ಕೈಕೊಳ್ಳಬೇಕು. ಯಾವುದೇ ಕಾಲಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಪ್ರತಿಯೊಂದು ಇಲಾಖೆಗಳು ದಿನದ 24 ಗಂಟೆ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ.