ಹೆಡ್ ಅಂಡ್ ಬುಷ್ ನಲ್ಲಿ ರಾಜನಾದ ರೋಶನ್..

ಬಣ್ಣದ ಲೋಕದತ್ತ  ಮುಖಮಾಡುವ ಯುವ ಪ್ರತಿಭೆಗಳಿಗೇನು ಕೊರತೆ ಇಲ್ಲ. ಒಂದಲ್ಲ ಒಂದು  ಪ್ರತಿಭೆ ಬೆನ್ನಿಗೆ ಕಟ್ಟಿಕೊಂಡು ‌ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

ಆ ಸಾಲಿಗೆ ಯುವ ನಟ ರೋಶನ್ ಅಗ್ನಿ ಶ್ರೀಧರ್ ಸಹ ಸೇರಿಕೊಂಡಿದ್ದಾರೆ. ಅಗ್ನಿ ಶ್ರೀಧರ್ ಗರಡಿಯಲ್ಲಿ ಪಳಗಿದ  ಅಥ್ಲೆಟಿಕ್ಸ್‌ನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ  ಪದಕ ಬಾಚಿಕೊಂಡ ಪ್ರತಿಭಾವಂತ. ರೋಶನ್‌ಗೆ  ಬಾಲ್ಯದಿಂದಲೂ ಅಥ್ಲೆಟಿಕ್ಸ್‌‌ ಎಂದರೆ ಪಂಚಪ್ರಾಣ. ಅದರಲ್ಲಿ ಗೆಲುವನ್ನೂ ಕಂಡರು ಕೂಡ. ಇದಕ್ಕಾಗಿ ಚೆನ್ನೈಯಲ್ಲಿ ವಿಶೇಷವಾದ ತರಬೇತಿ ಪಡೆದಿದು,ರಾಜ್ಯಮಟ್ಟ ಮತ್ತು ರಾಷ್ಟ್ರಮಟ್ಟದ ಓಟದ ಸ್ಪರ್ಧೆಗಳಲ್ಲಿ ಪದಕಗಳನ್ನು ಬೇಟೆಯಾಡಿದ ಚಲಗಾರ. ಶ್ರೀಮಂತ ಕುಟುಂಬದಲ್ಲಿ ಬೆಳೆದರೂ ಸೋಂಬೇರಿತನಕ್ಕೆ ಒಂದಿಷ್ಟು ಜಾಗ ಕೊಡದೆ ಕ್ರೀಡಾಂಗಣದಲ್ಲಿ ಜೀವನ ಸವೆಸಿದ ಸ್ಪರ್ಧಾ ಪಟು.

 ತನ್ನಂತೆ ಇನ್ನೂ ಹಲವರು ಗೆಲ್ಲಬೇಕು ಎಂಬ ಉದ್ದೇಶದಿಂದ ತಮ್ಮದೇ ಆದ ‘ ಇಂಡಿಯನ್ ಅಥ್ಲೆಟಿಕ್ ಅಕಾಡೆಮಿ’ ಆರಂಭಿಸಿ  ಹಲವರಿಗೆ ತರಬೇತಿ ನೀಡುತ್ತಿದ್ದಾರೆ ಅದರಲ್ಲಿ ಇಬ್ಬರು ದೃಷ್ಟಿ ವಿಕಲಚೇತನ ಹೆಣ್ಣುಮಕ್ಕಳು ತರಬೇತಿ ಪಡೆದು ಹಲವು ಟೂರ್ನಿಗಳಲ್ಲಿ ಪದಕ ಪಡೆದುಕೊಂಡಿರುವುದು ವಿಶೇಷ.

ಕ್ರೀಡೆಯಲ್ಲಿ  ಕನಸು ನನಸಾಗಿಸಿಕೊಂಡ ಯುವ ಪ್ರತಿಭೆ, ಬಣ್ಣದ ಲೋಕದಲ್ಲಿ ಒಂದು ಕೈ ನೋಡುವ ಆಸೆಯಿಂದ ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರದಲ್ಲಿ ನಾಯಕನಿಗೆ ತೊಡೆತಟ್ಟಿ ನಿಂತಿದ್ದಾರೆ.ಬೆಂಗಳೂರು ಭೂಗತ ಲೋಕದಲ್ಲಿ ಮೆರೆದ‌ ಡಾನ್  ಜೈರಾಜ್ ಕುರಿತಾದ ಕಥೆ ಒಳಗೊಂಡಿರುವ‌‌ ಚಿತ್ರ‌‌ ಇದು.

ಚಿತ್ರದಲ್ಲಿ  ಕೆ.ಕೆ. ರಾಜನ ಪಾತ್ರ , ರಾಜಾ ನನ್ನಷ್ಟೇ ಹೈಟು , ಪರ್ಸನಾಲಿಟಿ ಇದ್ದ ಕಾರಣ ನನ್ನನ್ನು ಆಯ್ಕೆ ಮಾಡಿದ್ದಾರೆ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ನ್ಯಾಯ ಸಲ್ಲಿಸಿದ್ದೇನೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ರೋಶನ್.

ನನಗೆ ನಟನೆಯ ಬಗ್ಗೆ ಏನೂ ಗೊತ್ತಿರಲಿಲ್ಲ . ಆದರೆ ಧನಂಜಯ್ , ನಿರ್ದೇಶಕರು ನನ್ನನ್ನು ಹುರಿದುಂಬಿಸಿ ನಟನೆ ಮಾಡಿಸಿದ್ದಾರೆ,ಹಾಗಾಗಿ ಅದು ಚೆನ್ನಾಗಿ ಬಂದಿದೆ ‘ ಎನ್ನುವ ವಿಶ್ವಾಸ ಅವರದು. ಚಿಕ್ಕ ವಯಸ್ಸಿನಿಂದಲೂ ಕ್ರೀಡೆಯ ಮೇಲೆ ಆಸಕ್ತಿ ಹೆಚ್ಚು . ಓಟದ ಸ್ಪರ್ಧೆಯಲ್ಲಿ ಹಲವು ಪದಕ ಗೆದ್ದಿದ್ದೇನೆ . ಈಗ ನನ್ನದೇ ಅಕಾಡೆಮಿ ತೆರೆದು ಅಲ್ಲಿ ನೂರಕ್ಕೂ ಹೆಚ್ಚಿನ ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ . ಮುಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿಯೇ ಮುಂದುವರಿಯುತ್ತೇನೆ. ನನಗೆ ನನ್ನ ಅಕಾಡೆಮಿಯಿಂದ ಪ್ರತಿಭಾವಂತ ಬಡ ಮಕ್ಕಳನ್ನು ಕ್ರೀಡಾ ಕ್ಷೇತ್ರದಲ್ಲಿ ಮುಂದೆ ತರಬೇಕು ಎಂಬ ಆಸೆ ಇದೆ  ಎನ್ನುವ ಕನಸು ಅವರದು.