ಹೆಚ್ – 1ಬಿ ವೀಸಾ ನಿಯಮ ತಿದ್ದುಪಡಿ

ವಾಷಿಂಗ್ಟನ್, ಜ. ೯- ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಾವಧಿ ಮುಗಿಯಲು ೧೫ ದಿನ ಬಾಕಿ ಇರುವಾಗಲೇ ಟ್ರಂಪ್ ಆಡಳಿತ ಹೆಚ್ – ೧ಬಿ ವೀಸಾ ನಿಯಮಗಳಿಗೆ ಮತ್ತೆ ತಿದ್ದುಪಡಿ ಮಾಡಿದ್ದು, ಈ ತಿದ್ದುಪಡಿಯಲ್ಲಿ ಈಗಿರುವ ಲಾಟರಿ ವ್ಯವಸ್ಥೆಯ ಬದಲು ಹೆಚ್ಚಿನ ವೇತನ ಮತ್ತು ಕೌಶಲ್ಯದ ಆಧಾರದ ಮೇಲೆ ವೀಸಾ ವಿತರಣೆ ನಡೆಯಲಿದೆ.
ಈ ಹಿಂದೆ ಹೆಚ್ – ೧ಬಿ ವೀಸಾವನ್ನು ಲಾಟರಿ ಮೂಲಕ ನೀಡಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಬದಲಿಸಿರುವ ಟ್ರಂಪ್ ಆಡಳಿತ ಹೆಚ್ಚಿನ ವೇತನ ಮತ್ತು ಕೌಶಲ್ಯವನ್ನು ಆಧರಿಸಿ ವೀಸಾ ನೀಡಿಕೆ ನಿಯಮಗಳನ್ನು ಜಾರಿ ಮಾಡಿದೆ.
ಫೆಡರಲ್ ರಿಜಿಸ್ಟರ್‌ನಲ್ಲಿ ಈ ತಿದ್ದುಪಡಿ ಹೊಸನಿಯಮಗಳು ನಿನ್ನೆ ಪ್ರಕಟವಾಗಿದ್ದು, ರಿಜಿಸ್ಟರ್ ನಲ್ಲಿ ಪ್ರಕಟವಾದ ೬೦ ದಿನಗಳ ನಂತರ, ಹೊಸನಿಯಮಗಳು ಜಾರಿಯಾಗಲಿವೆ.
ಏಪ್ರಿಲ್ ೧ ರಿಂದ ಅಮೆರಿಕಾದಲ್ಲಿ ಹೊಸಹಣಕಾಸು ವರ್ಷ ಆರಂಭವಾಗುತ್ತದೆ. ಅಂದಿನಿಂದಲೇ ಹೆಚ್ – ೧ಬಿ ವೀಸಾ ನಿಯಮಗಳು ಜಾರಿಯಾಗಲಿವೆ. ಅಮೆರಿಕಾದ ಹೋಂ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಬಿಡುಗಡೆ ಮಾಡಿರುವ ತಿದ್ದುಪಡಿ ಹೆಚ್ – ೧ಬಿ ವೀಸಾ ನಿಯಮಗಳ ಪ್ರಕಾರ ಅಮೆರಿಕಾದ ಪೌರತ್ವ ಮತ್ತು ವಲಸೆ ಇಲಾಖೆ ನೋಂದಣಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ನಂತರ, ಆ ಉದ್ಯೋಗ ಕ್ಷೇತ್ರದಲ್ಲಿ ವೇತನ ಮಟ್ಟದ ಶ್ರೇಯಾಂಕವು ಹೆಚ್ಚಿರುವುದನ್ನು ಗಣನೆಗೆ ತೆಗೆದುಕೊಂಡು ವೀಸಾ ನೀಡಿಕೆಯ ಬಗ್ಗೆ ನಿರ್ಧಾರ ಮಾಡುತ್ತದೆ.
ಈ ವೀಸಾ ನೀಡಿಕೆಯಲ್ಲಿ ಉದ್ಯೋಗಿಯ ವೇತನ ಮತ್ತು ಕೌಶಲ್ಯವೇ ಪ್ರಮುಖಪಾತ್ರ ವಹಿಸುತ್ತದೆ. ಈ ವೀಸಾ ನಿಯಮದಿಂದ ಹೆಚ್ಚಿನ ಕೌಶಲ್ಯವುಳ್ಳ ಉದ್ಯೋಗಿಗಳಿಗೆ ಉತ್ತಮ ವೇತನ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಅಮೆರಿಕಾ ಪ್ರತಿವರ್ಷ ೮೫ ಸಾವಿರ ಹೆಚ್ – ೧ಬಿ ಕೆಲಸದ ವೀಸಾಗಳನ್ನು ನೀಡುತ್ತದೆ. ಇದರಲ್ಲಿ ೬೫ ಸಾವಿರ ಮಂದಿ ವಿಶೇಷ ಹುದ್ದೆಗಳನ್ನು ಕಾರ್ಯನಿರ್ವಹಿಸುವವರಾಗಿದ್ದರೆ, ಉಳಿದವರು ಅಮೆರಿಕಾ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದ ವಿದೇಶಿಗರು ಆಗಿದ್ದಾರೆ.
ಈ ನೂತನ ವೀಸಾ ನಿಯಮದಿಂದ ವಿದೇಶಿಗರನ್ನು ಕಡಿಮೆ ವೇತನಗಳಲ್ಲಿ ದುಡಿಸಿಕೊಳ್ಳುತ್ತಿದ್ದ ಕಂಪನಿಗಳಿಗೆ ಬಾಧಕವಾಗಲಿದೆ ಎನ್ನಲಾಗುತ್ತಿದ್ದು, ಅದರಲ್ಲೂ ಭಾರತದಂತಹ ಕಂಪನಿಗಳಿಂದ ತೆರಳಿ ಕೆಲಸ ಮಾಡುತ್ತಿರುವವರಿಗೆ ಈ ನಿಯಮಗಳು ಮಾರಕ ಎನ್ನಲಾಗಿದೆ.