ಹೆಚ್.ಡಿ.ದೇವೇಗೌಡರು ಹಿಂದುಳಿದ ವರ್ಗಗಳ ವಿರೋಧಿಯಲ್ಲ: ಅಪ್ಪಣ್ಣ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.16: ಮಾಜಿ ಪ್ರಧಾನಿ ದೇವೇಗೌಡ ಅವರು ಹಿಂದುಳಿದ ವರ್ಗಗಳ ವಿರೋಧಿಯಲ್ಲ, ಹಾಲುಮತ ಕುರುಬ ಸಮಾಜದ ಮಠ, ರಾಜೇನಹಳ್ಳಿಯ ವಾಲ್ಮೀಕಿ ಗುರುಪೀಠ, ಮಡಿವಾಳ ಸಮಾಜದ ಗುರುಪೀಠ ಸೇರಿದಂತೆ ಅನೇಕ ಹಿಂದುಳಿದ ಜಾತಿಗಳ ಗುರುಪೀಠಗಳಿಗೆ ನಿವೇಶನ ನೀಡಿದ್ದು ದೇವೇಗೌಡರು ಎಂಬುದು ವಾಸ್ತವ ಸತ್ಯವಾಗಿದೆ ಎಂದು ರಾಜ್ಯ ಅಹಿಂದ ನಾಯಕ ಹಾಗೂ ವಾಲ್ಮೀಕಿ ಗುರುಪೀಠದ ಧರ್ಮದರ್ಶಿಗಳಾದ ಅಪ್ಪಣ್ಣ ಹೇಳಿದರು.
ಅವರು ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಮತ್ತು ಅಹಿಂದ ನಾಯಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಅಹಿಂದ ಮತದಾರರು ಬಿ.ಜೆ.ಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮತನೀಡುವಂತೆ ಮನವಿ ಮಾಡಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಕೇವಲ ಒಕ್ಕಲಿಗರ ನಾಯಕನೆಂಬ ಹಣೆಪಟ್ಟಿ ಕಟ್ಟಲಾಗಿದೆ. ದೇವೇಗೌಡ ಕೇವಲ ಒಕ್ಕಲಿಗರ ನಾಯಕರಲ್ಲ. ಅವರು ರಾಜ್ಯದ ಸಮಸ್ತ ಹಿಂದುಳಿದ ವರ್ಗಗಳ ನಾಯಕರು. ಮಾಜಿ ಪ್ರಧಾನಿ ದೇವೇಗೌಡ ಅವರು ಪರಿಶಿಷ್ಟ ವರ್ಗ, ಹಿಂದುಳಿದ ಜಾತಿಗಳು ಸೇರಿದಂತೆ ಅಹಿಂದ ವರ್ಗಗಳ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿರುವ ನಾಯಕರಾಗಿದ್ದಾರೆ. ದೇವೇಗೌಡ ಅವರ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರೆ, ಮರಾಠ ಸಮಾಜಕ್ಕೆ ಸೇರಿದ್ದ ಪಿಜಿಆರ್ ಸಿಂಧ್ಯ ಗೃಹ ಮಂತ್ರಿಯಾಗಿದ್ದರೆ ಗೌಡರ ಬೆಂಬಲದಿಂದಲೇ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರು. ಹಿಂದುಳಿದ ಮಡಿವಾಳ ಸಮಾಜಕ್ಕೆ ಸೇರಿದ ಲಕ್ಷ್ಮೀಸಾಗರ್ ಕಾನೂನು ಸಚಿವರಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ದೇವೇಗೌಡರು ಬೆಳೆಸದಿದ್ದರೆ ಅವರು ಇಂದು ರಾಜ್ಯದ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಆದ್ದರಿಂದ ದೇವೇಗೌಡರ ಬಗ್ಗೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುವ ಕಾಂಗ್ರೆಸ್ ಮುಖಂಡರು ವಾಸ್ತವ ಅರಿತು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಅಪ್ಪಣ್ಣ ಎನ್.ಡಿ.ಎ ಒಕ್ಕೂಟಕ್ಕೆ ತಮ್ಮ ಬೆಂಬಲ ಘೋಷಿಸಿರುವ ಜೆಡಿಎಸ್ ವರಿಷ್ಟ, ಮಾಜಿ ಪ್ರಧಾನಿ ದೇವೇಗೌಡ ಅವರು ದೇಶದ ಸಮಗ್ರತೆಯ ದೃಷ್ಟಿಯಿಂದ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿ ಸೇರಿದಂತೆ, ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿ ಹಾಗೂ ದೂರದರ್ಶಿತ್ವ ಹೊಂದಿರುವ ರಾಜ್ಯ ನಾಯಕರಾದ ಮಂಡ್ಯ ಲೋಕಸಭಾ ಅಭ್ಯರ್ಥಿ ಹೆಚ್. ಡಿ.ಕುಮಾರಸ್ವಾಮಿ ಅವರನ್ನು ಹಿಂದುಳಿದ ಅಹಿಂದ ಜಾತಿಗಳ ಜನರು ಬೆಂಬಲಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 30-40 ವರ್ಷಗಳಿಂದ ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವ ಹೋರಾಟ ನಡೆಯುತ್ತಿತ್ತು. ನಮ್ಮ ಹೋರಾಟಕ್ಕೆ ಸ್ಪಂಧಿಸಿ ವಾಲ್ಮೀಕಿ ಸಮಾಜವನ್ನು ಎಸ್.ಟಿ ಮೀಸಲು ವ್ಯಾಪ್ತಿಗೆ ಸೇರಿಸಿದವರು ಬಿ.ಎಸ್.ಯಡಿಯೂರಪ್ಪ, ವಾಲ್ಮೀಕಿ ಜಯಂತಿ ಆಚರಣೆಯನ್ನು ಜಾರಿಗೆ ತಂದು ಸಮುದಾಯಕ್ಕೆ ಗೌರವ ತಂದುಕೊಟ್ಟವರು ಬಿ.ಎಸ್.ಯಡಿಯೂರಪ್ಪ. ಸಂವಿಧಾನ ನಮ್ಮ ಹಕ್ಕು. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಇದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸ್ಪಷ್ಟಪಡಿಸಿದ್ದಾರೆ. ಆದರೂ ಕಾಂಗ್ರೆಸ್ಸಿಗರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತಾರೆಂಬ ಸುಳ್ಳು ಅಪಪ್ರಚಾರ ನಡೆಸುತ್ತಿದ್ದಾರೆ. ಎಸ್.ಸಿ ಮತ್ತು ಎಸ್.ಟಿ.ಸಮುದಾಯಗಳಿಗೆ ಕಾಂಗ್ರೆಸ್ಸಿಗರು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸಗಳನ್ನು ಮಾಡಿದರು. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಅನಂತರ ದೇಶದಲ್ಲಿ ದಲಿತ ಕೇರಿಗಳು ಸಿಮೆಂಟ್ ರಸ್ತೆ ಕಂಡಿವೆ. ಹಿಂದುಳಿದ ಸಮುದಾಯಗಳ ಶಿಕ್ಷಣಕ್ಕೆ ಒತ್ತು ನೀಡಿದ್ದಲ್ಲದೆ ಮೋದಿ ಯುವಕರ ಸ್ವಯಂ ಉದ್ಯೋಗಕ್ಕೆ ಅಗತ್ಯ ಸಾಲ ಸೌಲಭ್ಯ ಜಾರಿಗೆ ತಂದಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೂ ಸಾಲ ಸೌಲಭ್ಯ ಯೋಜನೆ ಜಾರಿಗೆ ತಂದಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಬದುಕಿದ್ದಾಗ ಕಾಂಗ್ರೆಸ್ ಕಿರುಕುಳ ನೀಡಿ ಅವರನ್ನು ಚುನಾವಣೆಯಲ್ಲಿ ಸೋಲಿಸಿತ್ತು. ಮೋದಿ ಸರ್ಕಾರ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಿದೆ. ಅಂಬೇಡ್ಕರ್ ಅವರ ಆಶಯಗಳಿಗೆ ಅನುಗುಣವಾಗಿ ಮೋದಿ ಸರ್ಕಾರ ನಡೆಯುತ್ತಿದೆ. ಇದನ್ನು ಹಿಂದುಳಿದ ವರ್ಗಗಳು ಅರ್ಥ ಮಾಡಿಕೊಂಡು ಕಾಂಗ್ರೆಸ್ಸಿಗರ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.
ತಾಲೂಕು ವಾಲ್ಮೀಕಿ ನಾಯಕ ಸಮಾಜದ ಮುಖಂಡ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ಮಾತನಾಡಿ ತಾಲೂಕಿಗೆ ಕೋರಮಂಡಲ್ ಸಕ್ಕರೆ ಕಾರ್ಖನೆ ಬರಲು ಕಾರಣಕರ್ತರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು. ಕೋರಮಂಡಲ್ ಕಾರ್ಖಾನೆ ಆರಂಭವಾದ ಅನಂತರ ಇಲ್ಲಿನ ರೈತರ ಆರ್ಥಿಕ ಸ್ಥಿತಿಗತಿಗಳು ಸುಧಾರಿಸವೆ. ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಠಿಯಾಗಿ ತಾಲೂಕು ಪ್ರಗತಿ ಪಥದಲ್ಲಿದೆ. ದೇವೇಗೌಡರ ಕುಟುಂಬದ ಋಣವನ್ನು ತೀರಿಸಲು ನಮಗೆ ಈಗ ಒಂದು ಅವಕಾಶ ಸಿಕ್ಕಿರುವುದರಿಂದ ತಾಲೂಕಿನ ಎಲ್ಲಾ ಕಬ್ಬು ಬೆಳೆಗಾರ ರೈತರೂ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಮಾಜಿ ಅಧ್ಯಕ್ಷ ಪರಮೇಶ್, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ನಾರಾಯಣನಾಯಕ, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಹಾದನೂರು ಮಂಜು, ಉಪಾಧ್ಯಕ್ಷ ರಾಜು, ಜಿಲ್ಲಾ ನೇಕಾರ ಪ್ರಕೋಷ್ಟ ಸಂಚಾಲಕ ಮೋಹನ್, ಮುಖಂಡರಾದ ಅಕ್ಕಿಹೆಬ್ಬಾಳು ಮಹೇಶ್ ನಾಯಕ, ವಾಸು, ಆಟೋ ತಮ್ಮಯ್ಯ, ಸೇರಿದಂತೆ ಅಹಿಂದ ವರ್ಗಗಳ ನಾಯಕರು ಉಪಸ್ಥಿತರಿದ್ದರು.