ಹೆಚ್.ಡಿ.ಕೆ ಗೆ ಕೃಷಿ ಮಂತ್ರಿ ಗಿರಿ ನೀಡಿ ಹಳ್ಳಿ ಹಕ್ಕಿ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜೂ.06:- ದೇಶದ ರೈತರಿಗೆ ಬೆನ್ನೆಲುಬಾಗಿ ನಿಲ್ಲಲು ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಕೃಷಿ ಸಚಿವ ಸ್ಥಾನ ನೀಡ ಬೇಕೆಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರದ ಬಿಜೆಪಿ ಮುಖಂಡರನ್ನು ರಾಜ್ಯದ ಜನತೆ ಪರವಾಗಿ ಒತ್ತಾಯ ಮಾಡಿದರು.
ಪಟ್ಟಣದ ಸ್ವಗೃಹದಲ್ಲಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಮುಖಂಡರೊಂದಿಗೆ ಕ್ಷೇತ್ರದ ಮತದಾರರ ಪರವಾಗಿ ಅಭಿನಂದನೆ ಸಲ್ಲಿಸಿ ಮಾದ್ಯಮರೊಂದಿಗೆ ಮಾತನಾಡಿದ ಅವರು ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ 28ಲೋಕಸಭಾ ಸದಸ್ಯರು ಪಕ್ಷಭೇದ ಮರೆತು ಸಮಸ್ಯೆಗಳ ಬಗ್ಗೆ ಒಗ್ಗೂಡಿಸಿ ನಾಡು, ನುಡಿ, ಜಲ, ಭಾಷೆಗಾಗಿ ಹೋರಾಟದ ಪ್ರಯತ್ನ ಮಾಡ ಬೇಕು. ಏಕೆಂದರೆ ನಾನು ಕೂಡ ಸಂಸದನಾಗಿ ಲೋಕಸಭಯಲ್ಲಿ ಯಾವ ಯಾವ ಪಕ್ಷದವರು ಹೇಗೆ ಎಂದು ನೋಡಿದ್ದೇನೆ ಎಂದರು.
ಕಾಂಗ್ರೆಸ್ ಪಕ್ಷ ಇಂದು ಜಾತ್ಯಾತೀತವಾಗಿಲ್ಲ, ಒಂದು ಜಾತಿಯ ಪಕ್ಷವಾಗಿ ನಿಲುವನ್ನು ಹೊಂದಿದೆ, ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುವ ನಿಲುವಿನಲ್ಲಿ ಜಾತಿ ರಾಜಕಾರಣ ಮಾಡುತ್ತಿದೆ, ಒಕ್ಕಲಿಗ, ಕುರುಬ, ಲಿಂಗಾಯತ ಹೆಚ್ಚಿರುವ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಮಾಡುತ್ತಿದೆ. ನಾನು ನಲವತ್ತು ವರ್ಷಗಳ ಅವದಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದವನು ಇಂತಹ ಪರಿಸ್ಥಿತಿ ಬಂದಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಗುಡುಗಿದರು.
ಮಂತ್ರಿಗಳ ಮಕ್ಕಳು, ಪತ್ನಿಯರು ಸಂಸತ್ ಪ್ರವೇಶ ಮಾಡುವ ಕಾಲ ಬಂದಿದೆ. ಜಿಲ್ಲಾ ಪಂಚಾಯತ್ ಸದಸ್ಯರಾಗಲು ಲಾಯಕ್ ಇಲ್ಲದವರು, ಅನುಭವ ಹೊಂದಿಲ್ಲದವರು ಸಂಸತ್ ಪ್ರವೇಶಿಸಿ ಅದರ ಘನತೆ ಹಾಳು ಮಾಡಲಾಗುತ್ತಿದೆ ಇದರಿಂದಾಗಿ ಸಂವಿಧಾನ, ಸಂಸತ್‍ಗೆ ಅವಮಾನ ಮಾಡುತ್ತಿದ್ದಾರೆ ರಾಜಕೀಯ ಪಕ್ಷಗಳು ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ, ರಾಜಕಾರಣ, ರಾಜಕಾರಣಿ ಮೂರು ಜನತಂತ್ರ ವ್ಯವಸ್ಥೆಯಲ್ಲಿ ಬದಲವಣೆ ಆಗಿದ್ದಿದ್ದರೆ ದೇಶಕ್ಕೆ ಮಾರಕ ಎಂದರಲ್ಲದೆ ಇವರುಗಳ ಬಗ್ಗೆ ವಿಶ್ಲೇಷಣೆ ಜೊತೆಗೆ ನೀವುಗಳು ಬರೆಯ ಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಪ್ರಭುಶಂಕರ್, ಖ್ಯಾತ ಮೂಳೆ ತಜ್ಞ ಡಾ.ಮೆಹಬೂಬ್ ಖಾನ್, ಜೆಡಿಎಸ್ ತಾ.ವಕ್ತಾರ ಕೆ.ಎಲ್.ರಮೇಶ್, ತಾಲ್ಲೂಕು ದಲಿತ ಮುಖಂಡ ಹನಸೊಗೆ ನಾಗರಾಜ್, ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೊರ್ಚ ಕಾರ್ಯದರ್ಶಿ ಹೆಚ್.ಡಿ.ಪ್ರಭಾಕರ್ ಜೈನ್, ತಾಲ್ಲೂಕು ಜೆಡಿಎಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಕೃಷ್ಣ ಶೆಟ್ಟಿ ಮತ್ತು ಕೃಷ್ಣಭಟ್ ಸೇರಿದಂತೆ ಇನ್ನಿತರರು ಹಾಜರಿದ್ದರು.