ಹೆಚ್.ಡಿ.ಕುಮಾರಸ್ವಾಮಿ ಶೀಘ್ರ ಗುಣಮುಖರಾಗಲು ಪ್ರಾರ್ಥನೆ

The Chief Minister of Karnataka, Shri H.D. Kumaraswamy meeting the Union Minister for Consumer Affairs, Food and Public Distribution, Shri Ram Vilas Paswan, in New Delhi on October 06, 2018.

ಕೋಲಾರ,ಏ.೨೦: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೋವಿಡ್‌ನಿಂದ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಕೋಲಾರ ತಾಲೂಕಿನ ಕಲ್ಲಂಡೂರು ಗ್ರಾಮದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ ೧೦೧ ಈಡುಗಾಯಿ ಹೊಡೆಯಲಾಯಿತು.
ಈವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಕೊರೊನಾ ರೋಗವು ವಿಶ್ವಕ್ಕೆ ವ್ಯಾಪಿಸಿದ್ದು, ಈಗಾಗಲೇ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.೨ನೇ ಅಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯವರೂ ಕೋವಿಡ್ ಸಂಕಷ್ಟಕ್ಕೆ ಸಿಲುಕಿದ್ದು, ನಾವು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ದೇವರಲ್ಲಿ ಪ್ರಾರ್ಥಿಸಿ ಶೀಘ್ರ ಗುಣಮುಖರಾಗಿ ನಮ್ಮ ಜತೆಗೆ ಬರಬೇಕು ಎಂದು ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ನನ್ನ ಅನುದಾನ ೩೦ ಲಕ್ಷ, ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್‌ಸಿಗಳಾದ ನಜೀರಹಮದ್, ಸಿ.ಆರ್.ಮನೋಹರ್ ತಲಾ ೧೦ ಲಕ್ಷರೂ ಅನುದಾನ ಸೇರಿದಂತೆ ಇನ್ನಿತರೆ ಅನುದಾನ ಬಳಸಿಕೊಂಡು ೭೫-೮೦ ಲಕ್ಷರೂ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದ ಮೇಲೆ ವಿಶೇಷ ವಾರ್ಡ್‌ಗಳನ್ನು ನಿರ್ಮಿಸಲಾಗುವುದು.
ಈಗ ಇರುವ ವಾರ್ಡ್‌ಗಳಿಗೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು. ಈಗಾಗಲೇ ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗಿರುವುದಾಗಿ ತಿಳಿಸಿದರು.
ಆಸ್ಪತ್ರೆಗೂ ಜಾಗದ ಕೊರತೆ ಹೆಚ್ಚಾಗಿದೆ. ಸ್ಯಾನಿಟೋರಿಯಂ ಬಳಿಯ ೩೦ ಎಕರೆ ಜಾಗವನ್ನು ಬಿಟ್ಟುಕೊಡು ವಂತೆ ಈಗಾಗಲೇ ಡಿಸಿ ಸಮ್ಮುಖದಲ್ಲಿ ಡಿಎಫ್‌ಒ ಬಳಿ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಕೈಗೊಂಡು ಅರೋಗ್ಯ ಇಲಾಖೆಗೆ ಆ ಜಾಗವನ್ನು ನೀಡಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಮುಂದುವರೆದ ರಾಷ್ಟ್ರದಲ್ಲಿ ಅದರಲ್ಲೂ ನಮ್ಮ ರಾಜ್ಯವು ಆರ್ಥಿಕವಾಗಿ ಮುಂದುವರೆದಿದ್ದರೂ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಬೆಡ್ ಸಿಗದೆ ಪರದಾಡುವಂತಾಗಿದ್ದು, ಸರಕಾರವು ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಉತ್ತಮವಾಗಿ ಕೆಲಸ ಮಾಡಲಾಗದೆ ಇಂತಹ ಸಂಕಷ್ಟ ಎದುರಾಗಿರುವುದು ದುರಂತ ಎಂದು ವಿಷಾಧ ವ್ಯಕ್ತಪಡಿಸಿದರು.
ಸರಕಾರವು ಏನು ನೀಡದಿದ್ದರೂ ಇಂತಹ ಸಂದರ್ಭದಲ್ಲಿ ಆರೋಗ್ಯವನ್ನಾದರೂ ನೀಡಲೇಬೇಕು. ಬೆಂಗಳೂರಿನಲ್ಲಿರುವ ಎಲ್ಲಾ ಸ್ಟಾರ್ ಹೋಟೆಲ್‌ಗಳನ್ನು ತಮ್ಮ ವಶಕ್ಕೆ ಪಡೆದು ಬಳಸಿಕೊಳ್ಳಲಿ ಎಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜಿ.ಕೆ.ವೆಂಕಟ ಶಿವಾರೆಡ್ಡಿ ಮಾತನಾಡಿ, ಎಲ್ಲ ಮುಖಂಡರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಪ್ರಪಂಚವೇ ಕೊರೊನಾವನ್ನು ಎದುರಿಸುತ್ತಿದ್ದು, ಶೀಘ್ರವಾಗಿ ಪ್ರಪಂಚದಿಂದಲೇ ರೋಗವು ಮುಕ್ತವಾಗಬೇಕೆಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಕುರ್ಕಿರಾಜರಾಜೇಶ್ವರಿ ಮತ್ತು ಸಿ.ಎಂ.ಆರ್ ಹರೀಶ್ ಮಾತನಾಡಿ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನ ಪ್ರಕರಣಗಳು ಜಾಸ್ತಿಯಾಗಿವೆ. ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿಗಳನ್ನ ಪಾಲನೆ ಮಾಡಬೇಕು. ಕಳೆದ ವರ್ಷ ಕೊರೋನಾದಿಂದ ಸಾಕಷ್ಟು ನೋವುಗಳನ್ನ ನೋಡಿದ್ದೇವೆ ಇದನ್ನ ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಮಾಸ್ಕ್, ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳಬೇಕು. ಹೆಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್‌ಕುಮಾರ್ ಅವರಿಗೂ ಕೊರೋನಾ ಬಂದಿದ್ದು ಶೀಘ್ರವಾಗಿ ಗುಣಮುಖರಾಗಿ ಮತ್ತಷ್ಟು ಜನಸೇವೆ ಮಾಡಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಕಿತ್ತಂಡೂರು ನಂಜುಂಡಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕುರ್ಕಿ ರಾಜರಾಜೇಶ್ವರಿ, ಮುಖಂಡರಾದ ಸಿಎಂಆರ್ ಶ್ರೀನಾಥ್, ವಕ್ಕಲೇರಿರಾಮು, ಬಣಕನಹಳ್ಳಿ ನಟರಾಜ್, ಈರಪ್ಪ, ಕಲ್ಲಂಡೂರು ನಂಜುಂಡಗೌಡ, ಕೃಷ್ಣಪ್ಪ, ವಕೀಲ ಲೋಕೇಶ್, ಬಾಲಗೋವಿಂದ, ಬೆಳಮಾರನಹಳ್ಳಿ ಆನಂದ್, ಮಾಲೂರು ಪುರಸಭೆ ಸದಸ್ಯ ಪರಮೇಶ್, ಡಾ.ರಮೇಶ್, ಖಾಜಿಕಲ್ಲಹಳ್ಳಿ ಹರೀಶ್, ಲೇಔಟ್ ಹರೀಶ್ ಉಪಸ್ಥಿತರಿದ್ದರು.