ಹೆಚ್ ಡಿಕೆ-ಯೋಗೇಶ್ವರ್ ಆರೋಪ ಪ್ರತ್ಯಾರೋಪ

ರಾಮನಗರ,ಜ.11-ಮಾಜಿ ಮುಖ್ಯಮಂತ್ರಿ ಶಾಸಕ ಹೆಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ ನಡುವೆ ಅರೋಪ ಪ್ರತ್ಯಾರೋಪಗಳ ವಾಕ್ ಸಮರ ಜೋರಾಗಿದೆ.
ರಾಮನಗರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಸಿ. ಪಿ. ಯೋಗೇಶ್ವರ ವಿರುದ್ಧ ಆರೋಪಗಳನ್ನು ಮಾಡಿದರೆ, ಸಿ. ಪಿ. ಯೋಗೇಶ್ವರ ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
“ಯೋಗೇಶ್ವರ ವಸೂಲಿ ಬಗ್ಗೆ ಊರುಗಳಲ್ಲೇ ಚರ್ಚೆ ಆಗುತ್ತಿದೆ. ಇದನ್ನು ನಾನು ಆರೋಪ ಮಾಡ್ತಿಲ್ಲ. ನಮ್ಮ ಕುಟುಂಬ ಯಾರಿಗೂ ರಾಜಿಯಾಗಲ್ಲ. ಪ್ರಧಾನಮಂತ್ರಿಯನ್ನೇ ನೋಡಿರುವ ಕುಟುಂಬ ನಮ್ಮದು. ಹಾಗಾಗಿ ಒಂದು ಮಂತ್ರಿ ಸ್ಥಾನಕ್ಕೆ ಹೆದರುತ್ತೇನಾ?” ಎಂದು ಹೆಚ್.ಕುಮಾರಸ್ವಾಮಿ ಪ್ರಶ್ನಿಸಿದರು.
ಯೋಗೇಶ್ವರ ಮಂತ್ರಿಯಾಗಿದ್ದಾಗಲೇ ಸೋಲಿಸಿದ್ದೇವೆ. ಚನ್ನಪಟ್ಟಣಕ್ಕೆ ನಾನು ಚುನಾವಣೆಯಲ್ಲಿ ಹೋಗಿರಲಿಲ್ಲಾ. ಆದರೂ ಕ್ಷೇತ್ರದ ಜನರು ನನಗೆ ಆರ್ಶೀವಾದ ಮಾಡಿದ್ದಾರೆ. ಇಂತಹ ಮಂತ್ರಿ ಸ್ಥಾನಗಳನ್ನ ಎಷ್ಟು ನೋಡಿಲ್ಲ ನಾನು?” ಎಂದರು.
ಗಂಭೀರ ಆರೋಪ; ವರ್ಗಾವಣೆ ವಿಚಾರವಾಗಿ ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ ಹೆಚ್. ಡಿ. ಕುಮಾರಸ್ವಾಮಿ, “ಇಲ್ಲಿನ ಎಸಿ ಯಾರು ಯಾರಿಗೆ ಎಷ್ಟು ಕಮೀಷನ್ ಕೊಟ್ಟಿದ್ದಾರೆ?, ಇಲ್ಲಿನ ಎಸಿಯನ್ನು ತೆಗೆಯಬೇಕು ನಾನು ಎಂದು ನಿರ್ಧಾರ ಮಾಡಿದ್ದೆ. ಮುಖ್ಯಮಂತ್ರಿಗಳು ಕೂಡ ಆದೇಶ ಮಾಡಿದರು. ನಂತರ ಅಲ್ಲಿ ಏನೇನು ಆಟ ನಡೆದಿದೆ ಎಂಬುದು ಗೊತ್ತಿದೆ. ಸಿಎಂ ಕಚೇರಿಯಿಂದ ಯಾರು ಯಾರಿಗೆ ಪೇಮೆಂಟ್ ಆಗಿದೆ ಅಂತಾಲೂ ಗೊತ್ತಿದೆ” ಎಂದು ಹೇಳಿದರು.
ನಾನು ನೇರವಾಗಿ ಹೇಳುತ್ತಿದ್ದೇನೆ. ಇಲ್ಲಿನ ಎಸಿ ನನಗೆ 3 ಕೋಟಿ ಆಫರ್ ಕೊಟ್ಟಿದ್ದರು. ಇವರು ರಾಮನಗರದ ಜನರನ್ನು ಉಳಿಸುತ್ತಾರ?. ಕೊಟ್ಟ ಹಣವನ್ನು ಎಲ್ಲಿಂದ ವಸೂಲಿ ಮಾಡಬೇಕು? ಜನರಿಂದ ವಸೂಲಿ ಮಾಡಬೇಕಾಗುತ್ತದೆ. ಈ ಸರಕಾರಕ್ಕೆ ಮಾನ ಮರ್ಯಾದೆ ಇದ್ದರೆ ಇಂತಹ ಅಧಿಕಾರಿಗಳನ್ನು ಇಟ್ಟುಕೊಂಡರೆ ಜನರ ಕೆಲಸ ಆಗುತ್ತಾ?” ಎಂದು ಪ್ರಶ್ನಿಸಿದರು.
“ಇಲ್ಲಿನ ಅಧಿಕಾರಿಗಳು ಏಜೆಂಟ್‌ಗಳ ಮೂಲಕ ಹಣ ಕೊಟ್ಟು ನಂತರ ಜನರ ಜೇಬಿಗೆ ಕೈ ಹಾಕಬೇಕಾಗುತ್ತೆ. ಬಿಜೆಪಿ ಸರಕಾರ ಭ್ರಷ್ಟಾಚಾರದ ವಿರುದ್ಧ ನಾನು ಮಾತನಾಡುತ್ತಿಲ್ಲ. ರಾಜ್ಯದ ಜನರು ಹಾಗೂ ಬಿಜೆಪಿ ಶಾಸಕರೇ ಮಾತನಾಡುತ್ತಿದ್ದಾರೆ. ಚನ್ನಪಟ್ಟಣ ಬಳಿ 13-16 ಎಕರೆ ಭೂಮಿಗೆ ಸುಳ್ಳು ದಾಖಲೆ ಸೃಷ್ಟಿ ಮಾಡಿದ್ದಾರೆ. ಸುಳ್ಳು ದಾಖಲೆ ಸೃಷ್ಟಿ ಮಾಡಿ ಮಗಳಿಗೆ ಬರೆಸಿಕೊಟ್ಟಿದ್ದಾರಲ್ಲಾ ಇಂತಹ ಕೆಲಸ ನಾನು ಮಾಡಿದ್ದೀನಾ?” ಎಂದು ಕುಮಾರಸ್ವಾಮಿ ಕೇಳಿದರು.
ಕುಮಾರಸ್ವಾಮಿ ಹೇಳಿದಂತ ಮಾತಿಗೆ ತಿರುಗೇಟು ನೀಡಿರುವಂತ ಎಂ ಎಲ್ ಸಿ ಸಿ.ಪಿ.ಯೋಗೇಶ್ವರ್, ನಾನು ಮಂತ್ರಿಯಾಗಲಿ ಆಮೇಲೆ ಏನ್ ಎಂಬುದನ್ನು ತೋರಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.