ಹೆಚ್ ಡಿಕೆಗೆ ಹಾರ ಹಾಕಲು‌ ಹೋಗಿ 1 ಲಕ್ಷ ಕಳಕೊಂಡ

ಬೆಂಗಳೂರು, ನ.7-ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಹಾರಹಾಕಲು ಹೋಗಿ ವ್ಯಕ್ತಿಯೊಬ್ಬ 1 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.
ದೇವನಹಳ್ಳಿಗೆ ಹೆಚ್.ಡಿ. ಕುಮಾರಸ್ವಾಮಿ ಭೇಟಿ ವೇಳೆ ನೀಡಿದ ವೇಳೆ ಹೂವಿನ ವ್ಯಾಪಾರ ಮಾಡುತ್ತಿದ್ದ ರಾಜೇಶ್ ಎಂಬವರ ಹಣ ಕಳ್ಳತನವಾಗಿದೆ.
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ರಾಜೇಶ್ ಹಣ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹೆಚ್.ಡಿ. ಕುಮಾರಸ್ವಾಮಿ ಬಂದಿದ್ದನ್ನು ಕಂಡು ಹಾರಹಾಕಲು‌ ಹೋಗಿದ್ದಾರೆ.
ಪ್ಯಾಂಟ್ ಜೇಬಿನಲ್ಲಿ ಹಣ ಇಟ್ಟುಕೊಂಡು ರಾಜೇಶ್ ಹೋಗಿದ್ದರು. ಜನಸಂದಣಿಯಲ್ಲಿ ರಾಜೇಶ್ ಜೇಬಿನಲ್ಲಿದ್ದ ಹಣವನ್ನು ಕಳ್ಳರು ಕದ್ದಿದ್ದಾರೆ. ಹಣ ಕಳೆದುಕೊಂಡು ರಾಜೇಶ್ ಕಣ್ಣೀರು ಹಾಕಿದ್ದಾರೆ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹಳ್ಳಿಗಳತ್ತ ಹೋರಾಟ:
ಈ ನಡುವೆ ಕುಮಾರಸ್ವಾಮಿ ರಾಜ್ಯದಲ್ಲಿ ಇನ್ನು ಯಾರೂ ರೈತರ ಸಾಲಮನ್ನಾ ಮಾಡಲ್ಲ. ಸಾಲಮನ್ನಾ ಮಾಡಿದ್ದರೂ ಏನೂ ಉಪಯೋಗಕ್ಕೆ ಬರಲ್ಲ. 25 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೇನೆ.
ಹೈನುಗಾರಿಕೆ, ದ್ರಾಕ್ಷಿ, ತೋಟಗಾರಿಕೆ ಬೆಳೆಗೆ ಕೊಟ್ಟರೆ ಅನುಕೂಲ ಆಗುತ್ತದೆ. ನಾನೂ ಸಹ ಹಸುಗಳನ್ನ ಸಾಕಿ ಹೈನುಗಾರಿಕೆ ಕಷ್ಟ ತಿಳಿದಿದ್ದೇನೆ. ನನಗೆ ಐದು ವರ್ಷ ಸರ್ಕಾರ ರಚಿಸಲು ಅವಕಾಶ ಕೊಟ್ಟರೆ ರೈತರು 1 ರೂಪಾಯಿ ಸಾಲ ಮಾಡದಂತೆ ನೋಡಿಕೊಳ್ಳುತ್ತೇನೆ.
ನಮಗೆ ಅಧಿಕಾರ ಕೊಡಿ ಎಂದು ಹಳ್ಳಿಗಳತ್ತ ಹೋಗುತ್ತೇನೆ. ಇದು ನನ್ನ ಕೊನೆಯ ಹೋರಾಟ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.