ಹೆಚ್ ಎಸ್ ಆರ್ ಪ್ಲೇಟ್ ಮೇ ೩೧ರ ಗಡುವು

ನವದೆಹಲಿ,ಮೇ೧೭:ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ಅಳವಡಿಕೆಗೆ ಮೇ ೩೧ ಗಡುವು ನೀಡಿರುವ ಪೊಲೀಸ್ ಇಲಾಖೆ ಜೂ. ೧ ರಿಂದ ಪ್ಲೇಟ್ ಅಳವಡಿಸದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಿದೆ.
ಕಳೆದ ಬಾರಿ ಫೆಬ್ರವರಿ ಅಂತ್ಯಕ್ಕೆ ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಲಾಗಿತ್ತು. ಆದರೆ, ಕಾಲಾವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಕಾಲಾವಕಾಶ ನೀಡುವಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮೇ ೩೧ಕ್ಕೆ ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿ ಪೊಲೀಸ್ ಇಲಾಖೆ ಆದೇಶಿಸಿತ್ತು.
ಮೇ ೩೧ಕ್ಕೆ ಅಂತಿಮ ಅವಕಾಶ ನೀಡಿದ್ದು, ಅಂದಾಜು ಇನ್ನೂ ೧೫ ದಿನಗಳೊಳಗೆ ಹೆಚ್‌ಎಸ್‌ಆರ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸದಿದ್ದರೆ ವಾಹನ ಮಾಲೀಕರು ಜೂ. ೧ ರಿಂದ ದಂಡ ತೆರಬೇಕಾಗುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ಅಳವಡಿಕೆಗೆ ಶೋ ರೂಂಗಳಲ್ಲಿ ಸೂಕ್ತ ನಿರ್ದೇಶನ ಹಾಗೂ ಸಹಕಾರ ಇಲ್ಲದಿರುವುದು ಅಳವಡಿಕೆ ವಿಳಂಬವಾಗುವ ಸಾಧ್ಯತೆ ಇದೆ. ಆನ್‌ಲೈನ್‌ಗಳಲ್ಲಿ ಮಾತ್ರ ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ಅಳವಡಿಕೆಗೆ ಅವಕಾಶವಿದೆ. ಹೆಚ್ಚುವರಿಯಾಗಿ ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ಅಳವಡಿಕೆಗೆ ಅವಕಾಶ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ದಂಡ ಎಷ್ಟು?
ಮೊದಲ ಬಾರಿಗೆ ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ೫೦೦ ರೂ. ದಂಡ ವಿಧಿಸಲು ನಿರ್ಧರಿಸಿದ್ದು, ಆನಂತರ ಪ್ರತಿ ವಾರಿಯೂ ಸಾವಿರ ರೂ. ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ಏ. ೧ಕ್ಕೂ ಮೊದಲು ಖರೀದಿಸಿದ ಹಾಗೂ ನೋಂದಣಿಯಾಗಿರುವ ವಾಹನಗಳು ೨ ಕೋಟಿಯಷ್ಟಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಅವಕಾಶ ನೀಡಲಾಗಿತ್ತು.
ಹೆಚ್‌ಎಸ್‌ಆರ್ ನಂಬರ್ ಪ್ಲೇಟ್‌ಗಳು ವಾಹನಗಳ ಭದ್ರತೆ ಉದ್ದೇಶದಿಂದ ಅಳವಡಿಸಲು ಆದೇಶಿಸಲಾಗಿದೆ. ಪ್ಲೇಟ್‌ನಲ್ಲಿ ಅಶೋಕಚಕ್ರದ ಮುದ್ರೆಯೂ ಇದೆ. ಪ್ಲೇಟ್‌ನ ಕೆಳಗೆ ೧೦ ನಂಬರಿನ ವಿಶಿಷ್ಟ ಗುರುತು ಇದೆ. ಒಮ್ಮೆ ಈ ಪ್ಲೇಟ್ ಅಳವಡಿಸಿದರೆ ಅದನ್ನು ಬಿಚ್ಚಲು ಸಾಧ್ಯವಾಗುವುದಿಲ್ಲ. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಈ ನಂಬರ್ ಪ್ಲೇಟ್ ಸಹಕಾರಿಯಾಗಲಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.