ಹೆಚ್.ಎಲ್.ಸಿ, ಎಲ್.ಎಲ್.ಸಿ ಕಾಲುವೆಗಳಿಗೆ ನೀರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.28: ತುಂಗಭದ್ರ ಜಲಾಶಯದ ಬಲದಂಡೆ ಮೇಲ್ಮಟ್ಟದ (ಹೆಚ್.ಎಲ್.ಸಿ) ಹಾಗೂ ಎಲ್.ಎಲ್.ಸಿ ಕಾಲುವೆಗಳಿಗೆ ಇಂದು ನೀರು ಬಿಡುಗಡೆ ಮಾಡಿದೆ.
ಜಲಾಶಯದ ಗರಿಷ್ಠ ಮಟ್ಟ 1633 ಅಡಿ ಇದ್ದು ಇಂದು 1620ಕ್ಕೆ ತಲುಪಿದೆ. ಜಲಾಶಯಕ್ಕೆ 84500 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಜಲಾಶಯದಲ್ಲಿ 59 ಟಿ.ಎಂ.ಸಿ ನೀರು ಸಂಗ್ರಹವಾಗಿದೆ.
ವಾಸ್ತವದಲ್ಲಿ ಮಳೆ ಬರುವುದು ತಡವಾಗಿ ಜಲಾಶಯದಲ್ಲಿ ನೀರು ಸಂಗ್ರಹವಾಗುವುದು ಸಹತಡವಾಗಿತ್ತು. ಕಳೆದ ವರ್ಷ ಜುಲೈ 8ರಂದೇ ಕೃಷಿ ಚಟುವಟಿಕೆಗಳಿಗೆ ನೀರು ಬಿಡಲಾಗಿತ್ತು. ಆದರೆ ಈ ವರ್ಷ 20 ದಿನಗಳ ಕಾಲ ವಿಳಂಬವಾಗಿದೆ. ಹೆಚ್.ಎಲ್.ಸಿ ಕಾಲುವೆಗೆ ಇಂದು ನೀರು ಬಿಟ್ಟಿರುವುದರಿಂದ ಇನ್ನೆರೆಡು ಮೂರು ದಿನದಲ್ಲಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಲಿದ್ದು ಮೆಣಸಿನಕಾಯಿ, ಭತ್ತದ ನಾಟಿ ಕಾರ್ಯ ಭರದಿಂದ ಸಾಗಲಿದೆ.
ಸದ್ಯ ಈಗ ಬಿಟ್ಟಿರುವ ನೀರು ಕುಡಿಯುವ ನೀರಿಗಾಗಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಜಿಲ್ಲೆಯ ಸಚಿವ, ಶಾಸಕರು ಆಗಸ್ಟ್ 1 ರಿಂದ ಕೃಷಿ ಚಟುವಟಿಕೆಗಳಿಗಾಗಿ ಉಪಕಾಲುವೆಗಳಿಗೆ ನೀರು ಬಿಡಲಿದೆಂದು ತಿಳಿಸಿರುವುದಾಗಿ ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರು ತಿಳಿಸಿದ್ದಾರೆ.