ಹೆಚ್‍ಡಿಕೆಯಿಂದ ಸಿಎಂಗೆ ಒತ್ತಡ ಹಾಕಿಸಿ; ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಂದ ಶಾಸಕರಿಗೆ ಮನವಿ

ಗುರುಮಠಕಲ್:ಮೇ.19: ಕೋವಿಡ್ -19 ವಿಷಮ ಪರಿಸ್ಥಿತಿಯಲ್ಲಿ ಹಗಲುರುಳೆನ್ನದೇ, ರಜೆ ಇಲ್ಲದೇ ದುಡಿಯುತ್ತಿರುವ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಹಿತ ಕಾಪಾಡಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವಂತೆ ಕರ್ನಾಟಕ ರಾಜ್ಯ ಆರೋಗ್ಯ, ವೈದ್ಯಕೀಯ ಇಲಾಖೆ ಹೊರ ಒಳ ಗುತ್ತಿಗೆ ನೌಕರರ ಸಂಘ ಶಾಸಕ ನಾಗನಗೌಡ ಕಂದಕೂರು ಅವರಿಗೆ ಒತ್ತಾಯಿಸಿದೆ.
ಮಂಗಳವಾರ ಶಾಸಕರ ಕಚೇರಿಯಲ್ಲಿ ಅವರ ಪರವಾಗಿ ಶಾಸಕರ ಪುತ್ರರೂ ಆದ ಜೆಡಿಎಸ್ ಯುವ ನಾಯಕ ಶರಣಗೌಡ ಕಂದಕೂರು ಅವರಿಗೆ ಮನವಿ ಸಲ್ಲಿಸಿದ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಯಮೋಜಿ, ಈಗಾಗಲೇ ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಅವರು ನಮ್ಮ ಸಂಘದ ನ್ಯಾಯಯುತ ಬೇಡಿಕೆಗಳು ಈಡೇರಿಸುವಂತೆ ಇತ್ತಿಚೆಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಹಾಗೂ ಸಂಘಕ್ಕೆ ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿಸಿ, ನಮ್ಮ ಸಂಘಟನೆಯ7 ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಮಾಜಿ ಸಿಎಂ ಎಚ್‍ಡಿಕೆ ಅವರಿಂದಲೂ ಒತ್ತಡ ತರಲು ಶಾಸಕರು ಸಹ ಪ್ರಯತ್ನಿಸಬೇಕೆಂದು ಸಲ್ಲಿಸಿದ ಮನವಿಯಲ್ಲಿ ವಿನಂತಿ ಮಾಡಿಕೊಂಡರು.
ಮನವಿ ಸ್ವೀಕರಿಸಿದ ಶರಣಗೌಡ ಕಂದಕೂರು ಈ ವಿಷಯ ಮಾಜಿ ಸಿಎಂ ಎಚ್‍ಡಿ ಕುಮಾರ ಸ್ವಾಮಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಚನಗೌಡ ಕರಡ್ಡಿ, ಜಿಲ್ಲಾ ಮುಖಂಡರಾದ ಸಂತೋಷ, ಪ್ರಸಾದ, ಡಾ|| ಭಾಗಾರೆಡ್ಡಿ ಇನ್ನಿತರರು ಇದ್ದರು.