ಹೆಚ್‍ಐವಿ ಸೋಂಕಿತರು ಅಧೈರ್ಯರಾಗುವುದು ಬೇಡ, ಕಾನೂನು ಸೇವೆ ಸದಾ ನಿಮ್ಮೊಂದಿಗಿದೆ:ಪ್ರಧಾನ ಸಿವಿಲ್ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ

ಶಹಾಪುರ:ಡಿ.4: ಹೆಚ್‍ಐವಿಯೊಂದಿಗೆ ಬದುಕುತ್ತಿರುವ ವ್ಯಕ್ತಿ, ಸಾರ್ವಜನಿಕ ಕ್ಷೇತ್ರದಲ್ಲಾಗಲಿ, ಖಾಸಗಿ ಕ್ಷೇತ್ರದಲ್ಲಾಗಲಿ, ಮಾನಸಿಕವಾಗಿ ಅಧೈರ್ಯರಾಗುವುದು ಬೇಡ, ಆರೋಗ್ಯದ ಕಾಳಜಿಯೊಂದಿಗೆ ಉತ್ತಮ ಬದುಕು ನಡೆಸಲು ಯಾವುದೇ ತೊಂದರೆಯಾಗದಂತೆ ಕಾನೂನು ಸೇವೆಗಳ ಪ್ರಾಧಿಕಾರ ನಿಮ್ಮೊಂದಿಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಕಾನೂನು ಸೇವಾ ಸಮಿತಿಯ ಕಾಡಪ್ಪ ಹುಕ್ಕೇರಿ ತಿಳಿಸಿದರು.

  ನಗರದ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ವಿಶ್ವಏಡ್ಸ್ ದಿನ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕಾನೂನುಸೇವೆಗಳ ಪ್ರಾಧಿಕಾರ ಬೆಂಗಳೂರು, ತಾಲೂಕು ಕಾನೂನು ಸೇವಾ ಸಮಿತಿ ಶಹಾಪುರ, ತಾಲೂಕ ವಕೀಲರ ಸಂಘ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸರ್ವರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಆರೋಗ್ಯ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು, ಮುಖ್ಯವಾಗಿ ಹೆಚ್‍ಐವಿ ಸೋಂಕು ತಗುಲಿದ ವ್ಯಕ್ತಿಯು ಮಾನಸಿಕವಾಗಿ ಕುಗ್ಗಿ ಹೋಗದಂತೆ ಸಮಾಜ ಸೋಂಕಿತ ವ್ಯಕ್ತಿಯ ಬಗ್ಗೆ ತಾರತಮ್ಯ ನೀತಿ ಅನುಸರಿಸಬಾರದು, ಉತ್ತಮ ಚಿಕಿತ್ಸೆ ಒಳ್ಳೆಯ ಬದುಕು ಸಾಗಿಸಲು ಅವಕಾಶ ಕಲ್ಪಿಸಬೇಕು ಹೆಚ್‍ಐವಿ ಸೋಂಕಿತರಿಗೆ ಹೆಚ್ಚಿನ ಸೇವೆಗಳನ್ನು ಕಲ್ಪಿಸುವುದು ಅದಕ್ಕೆ ಬೇಕಾದ ಎಲ್ಲಾ ರೀತಿಯ ಕಾನೂನು ಸೇವೆಗಳ ಸಹಕಾರ ನೀಡಲಾಗುವುದು ಎಂದರು.

    ಸಂಪನ್ಮೂಲ ವ್ಯಕ್ತಿ ಆರೋಗ್ಯ ಇಲಾಖೆಯ ಐಸಿಟಿಸಿ ಆಪ್ತ ಸಮಾಲೋಚಕರಾದ ಗುಂಡೂರಾವ ಹೆಚ್‍ಐವಿ ಏಡ್ಸ್ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಅಸುರಕ್ಷಿತ ಲೈಂಗಿಕತೆ ಸೇರಿದಂತೆ ಹಲವು ಕಾರಣಗಳಿಂದ ಬರುವ ರೋಗ ಬಾರದಂತೆ ತಡೆಗಟ್ಟಲು, ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಾಕಿಕೊಂಡಿದ್ದು, ಹಂತಹಂತವಾಗಿ ಹೆಚ್‍ಐವಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸೂಕ್ತ ಚಿಕಿತ್ಸೆ ಸೌಲಭ್ಯವಿದೆ, ಜಿಲ್ಲೆಯಲ್ಲಿ ಆರು ಪರೀಕ್ಷಾ ಕೇಂದ್ರಗಳಿವೆ ಸೋಂಕಿತರಿಗೆ ಧೈರ್ಯ ತುಂಬಿ ಸಮುದಾಯದಲ್ಲಿ ಸ್ವಾವಲಂಬಿಯಾಗಿ ಬದುಕಲು ಅಗತ್ಯ ಯೋಜನೆಗಳನ್ನು ಕಲ್ಪಿಸಲಾಗಿದೆ ಎಂದರು.

      ತಾಲೂಕಾ ವಕೀಲರ ಸಂಘದ ಅಧ್ಯಕ್ಷ ಶಾಂತಗೌಡ.ವಿ.ಪಾಟೀಲ ಉಪಾಧ್ಯಕ್ಷ ಹಯ್ಯಾಳಪ್ಪ ಹೊಸ್ಮನಿ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಪ್ರತಿಯೊಬ್ಬರು ಆರೋಗ್ಯಯುತ ಬದುಕು ಸಾಗಿüಸಲು ಆರೋಗ್ಯ ಭಾಗ್ಯದ ಜಾಗೃತಿ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಬೇಕು ಎಂದರು.

    ವೇದಿಕೆ ಮೇಲೆ ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಂ.ಸಜ್ಜನ್, ಸಹಾಯಕ ಸರ್ಕಾರಿ ಅಭಿಯೋಜಕ ವಿನಾಯಕ, ಸಿಡಿಪಿಓ ಗುರುರಾಜ ಇದ್ದರು. ಸುನಂದಾ ಬಿಂಗಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು, ಸಿಂಧು ವಂದಿಸಿದರು, ಕಾರ್ಯಕ್ರಮದಲ್ಲಿ ಭೀಮರಾಯ ವಕೀಲರು, ತಾಲೂಕಾ ಆರೋಗ್ಯನೀರಿಕ್ಷಣಾಧಿಕಾರಿ ಶರಣಬಸಪ್ಪ ಹೊಸ್ಮನಿ, ಬ್ಲಡ್‍ಬ್ಯಾಂಕ್‍ನ ರಾಚಣ್ಣಗೌಡ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸೇರಿದಂತೆ ವಿವಿಧ ಇಲಾಖೆಯವರು ಪಾಲ್ಗೊಂಡಿದ್ದರು.